ಎರಡು ವರ್ಷದಲ್ಲಿ 24 ಸಾವಿರ ಮಕ್ಕಳ ಆತ್ಮಹತ್ಯೆ: ಕೇಂದ್ರದಿಂದ ಸ್ಫೋಟಕ ಮಾಹಿತಿ, ಕಾರಣವೇನು?

children
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಎರಡು ವರ್ಷಗಳಲ್ಲಿ 14ರಿಂದ 18 ವಯಸ್ಸಿನ ಸುಮಾರು 24 ಸಾವಿರದ 568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 2017 ರಿಂದ 2019ರ ಅವಧಿಯಲ್ಲಿ ಈ ಘಟನೆ ನಡೆದಿದೆ.

ಈ ಕುರಿತ ಮಾಹಿತಿಯನ್ನು ಅಪರಾಧ ದಾಖಲೆಗಳ ಘಟಕ (ಎನ್​ಸಿಆರ್​ಬಿ) ಸಂಸತ್ತಿಗೆ ತಿಳಿಸಿದೆ. ಅತಿ ಹೆಚ್ಚು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು ಮಧ್ಯಪ್ರದೇಶದಲ್ಲಿ ಎಂದು ಇದು ಹೇಳಿದೆ. 2017ರಲ್ಲಿ 8,029, 2018ರಲ್ಲಿ 8,168 ಮತ್ತು 2019ರಲ್ಲಿ 8,377 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 13,325 ಮಂದಿ ಬಾಲಕಿಯರಾಗಿದ್ದಾರೆ.

24,568 ಮಕ್ಕಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿರುವುದು, 4,046 ಮಕ್ಕಳು ಈ ಕಾರಣಕ್ಕೆ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಅದು ವಿವರಣೆ ನೀಡಿದೆ. ಈ ಪೈಕಿ ಮೊದಲ ನಾಲ್ಕು ಸ್ಥಾನದಲ್ಲಿ ಇರುವುದು: ಮಧ್ಯಪ್ರದೇಶ- 3,115; ಪಶ್ಚಿಮ ಬಂಗಾಳ- 2,802; ಮಹಾರಾಷ್ಟ್ರ- 2,527 ಹಾಗೂ ತಮಿಳುನಾಡು - 2,035.

ಪರೀಕ್ಷೆಯಲ್ಲಿ ಫೇಲ್​ ಆಗಿರುವುದು ಹೊರತಾಗಿ ಇನ್ನಿತರ ಕಾರಣಗಳನ್ನು ನೀಡಿರುವ ಎನ್​ಸಿಆರ್​ಬಿ ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಂದ 639 ಮಕ್ಕಳು ಸಾವಿಗೆ ಶರಣಾಗಿದ್ದಾರೆ. ಇದರಲ್ಲಿ 411 ಬಾಲಕಿಯರಾಗಿದ್ದಾರೆ. 3,315 ಮಕ್ಕಳು ಪ್ರೇಮ ವೈಫಲ್ಯದಿಂದ, 2,567 ಮಕ್ಕಳು ಅನಾರೋಗ್ಯದ ಕಾರಣ, 81 ಮಕ್ಕಳು ದೈಹಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವುಗಳನ್ನು ಹೊರತುಪಡಿಸಿದರೆ ಪ್ರೀತಿಪಾತ್ರರ ಸಾವು, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ಬೇಡದ ಗರ್ಭಧಾರಣೆ, ಸಾಮಾಜಿಕ ಪ್ರತಿಷ್ಠೆಗೆ ಹಾನಿ, ನಿರುದ್ಯೋಗ, ಬಡತನ ಹಾಗೂ ಸೈದ್ಧಾಂತಿಕ ಕಾರಣಗಳಿಂದಾಗಿ ಮಕ್ಕಳ ಇಂಥದ್ದೊಂದು ಕೆಟ್ಟ ನಿರ್ಧಾರ ತೆಗೆದುಕೊಂಡಿರುವುದಾಗಿ ವಿವರಿಸಿದೆ.

ಚಿಕ್ಕಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ದುಃಖ, ಗೊಂದಲ, ಕೋಪ, ಒತ್ತಡ ಹೆಚ್ಚಿನದಾಗಿ ಕಾರಣವಾಗುತ್ತದೆ. ಹದಿಹರೆಯದವರಲ್ಲಿ ಒತ್ತಡ, ಆರ್ಥಿಕ ಅನಿಶ್ಚಿತತೆ, ನಿರಾಶೆ, ಖಿನ್ನತೆ, ಜೀವನದಲ್ಲಿ ಯಶಸ್ಸು ಕಾಣಲಿಲ್ಲವೆಂಬ ಹತಾಶೆ, ಪ್ರೇಮ ವೈಫಲ್ಯಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುತ್ತವೆ ಎಂದು ಚೈಲ್ಡ್ ರೈಟ್ಸ್ ಅಧ್ಯಕ್ಷೆ ಪೂಜಾ ಮರ್ವಾಹ ವಿವರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net