ಬಾಲಕಿಯನ್ನು ಅಪಹರಿಸಿ ಕೂಡಿಟ್ಟಿದ್ದ ಮಹಿಳೆ: ವಾರಗಟ್ಟಲೆ ಅತ್ಯಾಚಾರ ಮಾಡಿದ 13 ಮಂದಿ ಕಾಮುಕರಿಗೆ 20 ವರ್ಷ ಜೈಲು

child
Published on

ಜೈಪುರ: ಸುಮಾರು 15 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಸತತವಾಗಿ ಒಂಬತ್ತು ದಿನಗಳವರೆಗೆ ಸಾಮೂಹಿಕ ಅತ್ಯಾಚಾರ ಎಸಗಿ ಅಟ್ಟಹಾಸ ಮೆರೆದಿದ್ದ 13 ಮಂದಿ ಕಾಮುಕರಿಗೆ ತಲಾ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ರಾಜಸ್ಥಾನದ ಜೈಪುರ ಕೋರ್ಟ್‌ ಆದೇಶಿಸಿದೆ.

ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಕಾಮುಕ ಬಾಲಕರು ಸ್ಥಳೀಯ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದವರಿಗೆ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಕಳೆದ ಮಾರ್ಚ್ 6 ರಂದು ಸುಕೇಶ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭಯಾನಕ ಘಟನೆ ನಡೆದಿತ್ತು. ಕೋಟಾದ ನಿವಾಸಿಯಾಗಿದ್ದ ಬಾಲಕಿಯನ್ನು ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಬ್ಯಾಗ್‌ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಳು. ನಂತರ ಆಕೆಯನ್ನು ಕೂಡಿಹಾಕಿದ್ದಳು. ಅಲ್ಲಿ ಬಾಲಕಿ ಮೇಲೆ ದಿನವೂ ಅತ್ಯಾಚಾರ ನಡೆಯುತ್ತಿತ್ತು. ಸತತ 9 ದಿನಗಳವರೆಗೆ ಕೊಠಡಿಯಲ್ಲಿ ಬಾಲಕಿಯನ್ನು ಕೂಡಿಹಾಕಲಾಗಿತ್ತು. ನಾಲ್ವರು ಬಾಲಕರು ಸೇರಿದಂತೆ 17 ಮಂದಿ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದರು.

ಅಲ್ಲಿಂದ ಬಾಲಕಿ ಹೇಗೋ ತಪ್ಪಿಸಿಕೊಂಡು ಬಂದಿದ್ದಳು. ಆಕೆಯ ಪಾಲಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಮೇ 7 ರಂದು ನ್ಯಾಯಾಲಯಕ್ಕೆ 1750 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದರು. ಇದರ ಆಧಾರದ ಮೇಲೆ ಈಗ ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಪ್ರಮುಖ ಭಾಗಿದಾರಳಾಗಿದ್ದ ಬುಲ್ಬುಲ್ ಅಲಿಯಾಸ್ ಪೂಜಾ ಜೈನ್‌ಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರಕ್ಕೆ ಸಹಾಯ ಮಾಡಿದ ಮಹಿಳೆಯ ವಿರುದ್ಧವೂ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಆಕೆಗೆ 4 ವರ್ಷಗಳ ಕಠಿಣ ಶಿಕ್ಷೆ ಜತೆಗೆ 7 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net