

ಇಸ್ಲಾಮಾಬಾದ್: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿದೆ. ಇದಾಗಲೇ ಲಕ್ಷಾಂತರ ಪಾಕಿಸ್ತಾನಿಗಳು ಮನೆ ಕಳೆದುಕೊಂಡಿದ್ದಾರೆ. ಇವರಿಗೆ ಇದಾಗಲೇ ಆಶ್ರಯ ಕಲ್ಪಿಸಲಾಗಿದೆ.
ಆಗಸ್ಟ್ ತಿಂಗಳೊಂದರಲ್ಲೇ 166 ಮಿ.ಮೀ. ಮಳೆಯಾಗಿದ್ದು, ದಕ್ಷಿಣ ಭಾಗದ ಸುಮಾರು 23 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಇದರ ಬೆನ್ನಲ್ಲೇ ಪಾಕಿಸ್ತಾನ ಸರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಬಲೂಚಿಸ್ತಾನ, ಖೈಬರ್ ಪಖ್ತುಂಖ್ವಾ, ಪಂಜಾಬ್ ಪ್ರಾಂತ್ಯಗಳಲ್ಲಿ ನದಿಗಳು ಉಕ್ಕಿ ಹರಿದು ಮನೆಗಳು ಕೊಚ್ಚಿಹೋಗುತ್ತಿವೆ.
ಮೊದಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಪ್ರವಾಹದಿಂದ ಕಂಗೆಟ್ಟು ಹೋಗಿದೆ. ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡುತ್ತಲಿದೆ. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಸರ್ಕಾರ ವಿಫಲವಾಗಿರುವ ಕಾರಣ ಪಾಕಿಸ್ತಾನ ಸೇನೆ ಜನರ ಸಹಾಯಕ್ಕೆ ಮುಂದಾಗಿದೆ.
ಆದರೆ ಅಚ್ಚರಿಯ ಸಂಗತಿ ಎಂದರೆ, ಸಹಾಯಕ್ಕಾಗಿ ಬಂದ ಸೈನಿಕರನ್ನೇ ಈ ಪಾಕಿಗಳು ಥಳಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಪ್ರವಾಹಕ್ಕೆ ಸಿಲುಕಿರುವ ಪೈಕಿ ಸಿಂಧ್ ಪ್ರಾಂತ್ಯವು ಬಹಳ ದುಸ್ಥಿತಿಯಲ್ಲಿದೆ. ಕಂಟ್ರೋಲ್ ರೂಮ್ ಸ್ಥಾಪಿಸಿ, ರಕ್ಷಣಾ ಕಾರ್ಯಾಚರಣೆಗೆ ಯತ್ನಿಸುತ್ತಿದ್ದೇವೆ ಎಂದು ಪಾಕಿಸ್ತಾನದ ಪರಿಸರ ಖಾತೆ ಸಚಿವ ಶೆರ್ರಿ ರೆಹಮಾನ್ ತಿಳಿಸಿದ್ದರು. ಇದರ ಬೆನ್ನಲ್ಲೇ ಅಲ್ಲಿಯ ಜನರ ಸಹಾಯಕ್ಕಾಗಿ ಸೇನೆಯನ್ನು ಕಳುಹಿಸಲಾಗಿತ್ತು. ಆದರೆ ಪಾಕಿಸ್ತಾನದ ಸೇನೆಯು ತಲುಪಿದಾಗ, ಜನರು ಅವರನ್ನು ಥಳಿಸಿದ್ದಾರೆ. ಇದಕ್ಕೆ ಕಾರಣ, ಅವರು ವಿಡಿಯೋ ಮಾಡಲು ಬಂದಿದ್ದಾರೆ ಎಂದು ತಿಳಿದುಕೊಂಡಿರುವುದಂತೆ!
ಈ ನಡುವೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಮರ್ರಿಯಮ್ ಔರಂಗಜೇಬ್ ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲರೂ ತಾಯ್ನಾಡಿನ ರಕ್ಷಣೆಗೆ ಮುಂದಾಗಬೇಕು. ದೊಡ್ಡ ಮೊತ್ತದ ದೇಣಿಗೆ ನೀಡಬೇಕು. ಅಂದಾಜು 2,500 ಕೋಟಿ ರೂ. ಪರಿಹಾರ ಮೊತ್ತದ ಅಗತ್ಯವಿದೆ ಎಂದಿದ್ದಾರೆ. ಒಂದು ಲಕ್ಷ ಟೆಂಟ್‌ಗಳ ನಿರ್ಮಾಣ ಮೂಲಕ ನಿರಾಶ್ರಿತರಿಗೆ ಶಿಬಿರ ನಿರ್ಮಿಸಬೇಕಿದೆ. ಜಾನುವಾರುಗಳ ಸಾವಿಗೆ ಪರಿಹಾರ, ಮನೆಗಳ ದುರಸ್ತಿಯ ದೊಡ್ಡ ಸವಾಲು ಸರಕಾರದ ಎದುರಿಗಿದೆ ಎಂದು ಸಚಿವೆ ಮರ್ರಿಯಮ್ ಔರಂಗಜೇಬ್ ಸುದ್ದಿಗಾರರ ಮುಖಾಂತರ ವಿದೇಶದಲ್ಲಿರುವ ಪಾಕಿಸ್ತಾನದ ಪ್ರಜೆಗಳಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡಿದ್ದಾರೆ. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ: