

ಜಮ್ಮು: 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಗೆ ನಾನೇ ಹೊಣೆ ಎಂಬುದು ಸತ್ಯವಾದರೆ, ಈ ದೇಶದ ಯಾವುದೇ ಮೂಲೆಗೆ ಕರೆದುಕೊಂಡು ಹೋಗಿ ನೇಣಿಗೇರಿಸಿದರೂ ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು.
ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಪ್ರಾಮಾಣಿಕ ನ್ಯಾಯಾಧೀಶರ ಸಮಿತಿಯನ್ನು ರಚನೆ ಆಗಬೇಕಿದೆ. ಆಗಷ್ಟೇ ಅಂದು ನಡೆದಿರುವ ಸತ್ಯ ಹೊರಬೀಳುತ್ತದೆ. ದುರಂತಕ್ಕೆ ಫಾರೂಕ್ ಅಬ್ದುಲ್ಲಾರೇ ಹೊಣೆ ಎಂಬುದು ಸತ್ಯವಾದರೆ, ಈ ದೇಶದ ಯಾವುದೇ ಮೂಲೆಗೆ ಕರೆದುಕೊಂಡು ಹೋಗಿ ನೇಣಿಗೇರಿಸಿದರೂ ಅದಕ್ಕೆ ನಾನು ಸಿದ್ಧನಿದ್ದೇನೆ. ಇದರ ತನಿಖೆಯಾಗಲಿ ಎಂದು ಸವಾಲು ಎಸೆದಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಕೆಲವು ಸರ್ಕಾರಗಳು ದಿ ಕಾಶ್ಮೀರಿ ಫೈಲ್ಸ್ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸುತ್ತಿವೆ. ಈ ಮೂಲಕ ಜನರ ಹೃದಯದಲ್ಲಿ ನಮ್ಮ ಬಗ್ಗೆ ಇನ್ನಷ್ಟು ದ್ವೇಷ ಹುಟ್ಟುವಂತೆ ಮಾಡುತ್ತಿವೆ ಎಂದಿದ್ದಾರೆ. ತೆರಿಗೆ ವಿನಾಯಿತಿ ಘೋಷಣೆ ಮಾಡುವ ಜತೆಗೆ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಿ ಎಂಬ ಕರೆ ನೀಡಲಾಗುತ್ತಿದೆ. ಪ್ರತಿಯೊಬ್ಬ ಯೋಧ, ಪೊಲೀಸ್ ಕೂಡ ಈ ಚಿತ್ರ ನೋಡಬೇಕು ಎಂದು ಸಾರಲಾಗುತ್ತಿದೆ. ಇದರಿಂದಾಗಿ ಜನರಿಗೆ ನಮ್ಮ ಬಗ್ಗೆ ಇನ್ನಷ್ಟು ದ್ವೇಷ ಹುಟ್ಟಿಕೊಳ್ಳುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಕೆಲವರು ನನ್ನನ್ನೂ ಈ ಹತ್ಯಾಕಾಂಡಕ್ಕೆ ಗುರಿ ಮಾಡುತ್ತಿದ್ದಾರೆ. ಸತ್ಯಾಂಶ ಹೊರಬರಬೇಕಿದೆ. ಅದು ಬಿಟ್ಟು ಸುಮ್ಮನೆ ಯಾರನ್ನೋ ಹೊಣೆ ಮಾಡಬಾರದು. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಕ್ಕೆ ನಾನು ಹೊಣೆಗಾರನಲ್ಲ. ಈ ಬಗ್ಗೆ ಸತ್ಯ ತಿಳಿದುಕೊಳ್ಳಲು ಇಚ್ಛಿಸುವವರು, ಆ ಸಮಯದಲ್ಲಿ ಗುಪ್ತಚರ ಇಲಾಖೆ ಮುಖ್ಯಸ್ಥನಾಗಿದ್ದವರ ಬಳಿ ಮಾತನಾಡಬೇಕು. ಇಲ್ಲವೇ ಕೇರಳದ ಈಗಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನೂ ಕೇಳಬಹುದು. ಯಾಕೆಂದರೆ ಆ ಸಮಯದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು ಎಂದು ಹೇಳಿದ್ದಾರೆ.