BREAKING: ಜ್ಞಾನವಾಪಿ ಮಸೀದಿಯಲ್ಲಿನ ಶೃಂಗಾರ ಗೌರಿ, ಶಿವಲಿಂಗದ ಪೂಜೆ: ವಿಚಾರಣೆಗೆ ಸಿಕ್ಕಿತು ಅನುಮತಿ- ಕೋರ್ಟ್​ನಿಂದ ಮಹತ್ವದ ತೀರ್ಪು

jnanavapi1
Published on

ವಾರಾಣಸಿ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಿಕೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ ವಾರಣಾಸಿ ಕೋರ್ಟ್​ ಆದೇಶ ಹೊರಡಿಸಿದೆ. ಮಸೀದಿ ಆವರಣದಲ್ಲಿ ಸಿಕ್ಕಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿ ಇದಾಗಿದೆ.

ಈ ಆದೇಶದಿಂದಾಗಿ ಪೂಜೆಗೆ ಹಿಂದೂಗಳಿಗೆ ಅವಕಾಶ ನೀಡಬಹುದೇ, ಬೇಡವೇ ಎಂಬ ಬಗ್ಗೆ ಕೋರ್ಟ್​ ಇನ್ನುಮುಂದೆ ವಿಚಾರಣೆಯನ್ನು ಪ್ರಾರಂಭಿಸಲಿದೆ.

ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲೆ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು.

ಮಸೀದಿಯ ಜಾಗದಲ್ಲಿ ಮಂದಿರ ಇದೆ ಎಂದು ಕೆಲವರು ವಾದಿಸಿದ್ದರು. ಇದು ಕಾಶಿ ವಿಶ್ವನಾಥನಿಗೆ ಸೇರಿರುವ ಜಾಗ ಎಂದು ಹಿಂದೂಗಳ ವಾದವಾಗಿದೆ. ಆದರೆ ಈ ವಾದದಲ್ಲಿ ಅರ್ಥವಿಲ್ಲ, ಇದು ಕೇವಲ ಮಸೀದಿ ಎನ್ನುವುದು ಮುಸ್ಲಿಮರ ಪ್ರತಿವಾದ.

ಈ ವಾದ-ವಿವಾದ- ಪ್ರತಿವಾದಗಳ ನಡುವೆಯೇ ತಮಗೆ ಪೂಜೆಗೆ ಅವಕಾಶ ನೀಡುವಂತೆ ಕೋರಿ ಮಹಿಳೆಯರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಿಗೂ ಹೆಚ್ಚು ಕಾಲ ವಾದ-ಪ್ರತಿವಾದ ನಡೆದಿತ್ತು. ಈ ಪ್ರಕರಣ ಸುಪ್ರೀಂಕೋರ್ಟ್​ಗೂ ಹೋಗಿತ್ತು. ಸುಪ್ರೀಂಕೋರ್ಟ್​ ಸೂಚನೆ ಮೇರೆಗೆ ವಾರಣಾಸಿ ಕೋರ್ಟ್​, ಮಹಿಳೆಯರು ಸಲ್ಲಿಸಿರುವ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬಹುದೇ, ಬೇಡವೆ ಎಂಬ ಬಗ್ಗೆ ವಿಚಾರಣೆ ನಡೆಸಿತ್ತು.

ಇದೀಗ ತೀರ್ಪು ಪ್ರಕಟಗೊಂಡಿದ್ದು ಮಹಿಳೆಯರಿಗೆ ಜಯವಾಗಿದೆ. ಇದರಿಂದ ಹಿಂದೂಗಳಿಗೆ ಮೊದಲ ಹಂತದ ಜಯ ಸಿಕ್ಕಿದೆ. ಮುಂದಿನ ವಿಚಾರಣೆಯನ್ನು  ಕೋರ್ಟ್​ ಇದೇ 22ರಂದು ನಡೆಸಲಿದೆ.

ಇಂದು ತೀರ್ಪಿಗೂ ಮುನ್ನ ಕೋರ್ಟ್​ ಆವರಣದಲ್ಲಿ ಜಮಾಯಿಸಿದ್ದ ಹಿಂದೂ ಭಕ್ತರು ಪೂಜೆ ಸಲ್ಲಿಸಿದ ಘಟನೆ ಕೂಡ ನಡೆದಿದೆ. ಅರ್ಜಿದಾರ ಮಹಿಳೆಯರಿಗೆ ಶಾಲು ಹಾಕಿ ಸನ್ಮಾನ ಕೂಡ ಮಾಡಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net