'ಭಾರತ ಐಕ್ಯತಾ ಯಾತ್ರೆ'ಯ ಸಭೆಯ ಬ್ಯಾನರ್​ನಲ್ಲಿ ಸಿದ್ದು ಮಿಸ್ಸಿಂಗ್​! ಅಭಿಮಾನಿಗಳಿಗೆ ತಳಮಳ

congress
Published on

ರಾಯಚೂರು: 'ಭಾರತ ಐಕ್ಯತಾ ಯಾತ್ರೆ'ಯ ಪೂರ್ವಭಾವಿ ಸಭೆಯ ಬ್ಯಾನರ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾವಚಿತ್ರ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇದರಿಂದಾಗಿ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ತಳಮಳ ಶುರುವಾಗಿದೆ.

ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಅದಕ್ಕೆ ಸಂಬಂಧಿಸಿದ ಬ್ಯಾನರ್​ ಹಾಕಲಾಗಿದೆ. ಆದರೆ ಅದರಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣೆಯಾಗಿದೆ!

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಎಚ್. ಆಂಜನೇಯ, ಮುಖಂಡರಾದ ಬಿ.ಕೆ.ಹರಿಪ್ರಸಾದ ಫೋಟೋ ಬ್ಯಾನರ್​ನಲ್ಲಿ ಇದೆ, ಆದರೆ ಸಿದ್ದರಾಮಯ್ಯ ನಾಪತ್ತೆಯಾಗಿದ್ದಾರೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ 'ಭಾರತ ಐಕ್ಯತಾ ಯಾತ್ರೆ' ನಡೆಯುತ್ತಿದ್ದು, ಈ ಯಾತ್ರೆ ಇದೇ 30ರಂದು ರಾಜ್ಯ ಪ್ರವೇಶಿಸಲಿದೆ. 'ಭಾರತ ಐಕ್ಯತಾ ಯಾತ್ರೆ' ನಿಮಿತ್ತ ರಾಯಚೂರಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್​ ಅವರು, ಸ್ಥಳ ಪರಿಶೀಲನೆ ಮಾಡಿದ್ದಾರೆ.

ರಾಜ್ಯದಲ್ಲಿ ಯಾತ್ರೆ 510 ಕಿಲೋ ಮೀಟರ್​ನಷ್ಟು ದೂರ ಸಂಚರಿಸಲಿದೆ. ದಸರಾ ಸಂದರ್ಭ ಸೇರಿ ಮೂರು ದಿನ ಬಿಡುವಿನ ಹೊರತಾಗಿ ಒಟ್ಟು 21 ದಿನ ಪಾದಯಾತ್ರೆ ನಡೆಯಲಿದೆ. ಯಾತ್ರೆಯಲ್ಲಿ ಸಂಘ ಸಂಸ್ಥೆಗಳು ಭಾಗವಹಿಸಲು ಮುಕ್ತ ಅವಕಾಶ ಇದೆ ಎಂದು ಯಾತ್ರೆಯ ಕುರಿತು ಇದಾಗಲೇ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net