

ಚಾಮರಾಜನಗರ: ಮೃತಪಟ್ಟ ವ್ಯಕ್ತಿಯೊಬ್ಬನ ಶವಕ್ಕಾಗಿ ಆತನ ಪತ್ನಿ ಹಾಗೂ ಪ್ರೇಯಸಿ ಜಗಳ ಮಾಡಿಕೊಂಡಿರುವ ವಿಲಕ್ಷಣ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ.
ದೊಡ್ಡತುಪ್ಪೂರು ಗ್ರಾಮದ ಪಾಪಣ್ಣಶೆಟ್ಟಿ ಅವರ ಶವ ಪಡೆಯಲು ಹೀಗೊಂದು ಗುದ್ದಾಟ ನಡೆದಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಪಾಪಣ್ಣಶೆಟ್ಟಿ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರು ನಿಮಿತಾ ಎನ್ನುವವರ ಜತೆ ಮದುವೆಯಾಗಿದ್ದರು. ಆದರೆ ಅವರಿಂದ ದೂರವಾಗಿದ್ದರು. ನಂತರ ಮಹದೇವಮ್ಮ ಎನ್ನುವವರ ಜತೆ ವಾಸವಾಗಿದ್ದರು.
ತನ್ನ ತಂದೆಯಿಂದ ಆಸ್ತಿ ಬರೆದುಕೊಂಡು ಮೋಸ ಮಾಡಿದ್ದಾನೆ ಎಂದು ಪತ್ನಿ ನಿಮಿತಾ ಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ದು, ಅದಿನ್ನೂ ಇತ್ಯರ್ಥಕ್ಕೆ ಬಾಕಿ ಇದೆ. ಇದರ ನಡುವೆಯೇ ಪಾಪಣ್ಣಶೆಟ್ಟಿ ಮೃತಪಟ್ಟಿದ್ದಾರೆ. ತಮ್ಮ ಪತಿಯ ಸಾವು ಸ್ವಾಭಾವಿಕವಲ್ಲ ಎನ್ನುವುದು ನಿಮಿತಾ ವಾದ.ಈ ಹಿನ್ನೆಲೆಯಲ್ಲಿ ಅಸ್ವಾಭಾವಿಕ ಸಾವು ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ. ಆಕೆಯ ದೂರಿನ ಮೇರೆಗೆ ಶವಪರೀಕ್ಷೆ ನಡೆಸಲಾಗಿತ್ತು.
ಶವಪರೀಕ್ಷೆ ನಂತರ ಗಂಡನ ಶವ ನೀಡುವಂತೆ ಕೇಳಿಕೊಂಡರೆ ಅತ್ತ ಮಹದೇವಮ್ಮ ಓಡಿಬಂದು ತಮಗೆ ನೀಡುವಂತೆ ಕೇಳಿದ್ದಾರೆ. ಇದೀಗ ಪೇಚಿಗೆ ಸಿಲುಕಿರುವುದು ಪೊಲೀಸರು. ಪಾಪಣ್ಣಶೆಟ್ಟಿ ಶವವನ್ನು ಶವಾಗಾರಕ್ಕೆ ರವಾನಿಸಿದ್ದು, ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳಿ ಎಂದಿದ್ದಾರೆ!