

ಕಾಬುಲ್: ಇಡೀ ಅಫ್ಘಾನಿಸ್ತಾನವನ್ನು ತಮ್ಮ ಕಂಟ್ರೋಲ್ಗೆ ತೆಗೆದುಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಇದೀಗ ತಾಲಿಬಾನಿಗಳ ಆಡಳಿತ ಶುರುವಾಗಿದೆ. ಇದಾಗಲೇ ಕಂಡಕಂಡವರ ರಕ್ತ ಹರಿಸಿ, ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೇಕೇ ಹಾಕಿದ ಈ ತಾಲಿಬಾನಿಗಳು ಹೇಳಿದಂತೆ ಕೇಳುವ ಪರಿಸ್ಥಿತಿ ಸದ್ಯ ಅಫ್ಘಾನಿಸ್ತಾನದಲ್ಲಿದೆ.
ಇವರ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನಿಗಳು ಕ್ಷಣಕ್ಷಣವೂ ಜೀವ ಭಯದಿಂದ ಇರುವ ಪರಿಸ್ಥಿತಿ ಇದೆ. ಇಡೀ ಅಫ್ಘಾನಿಸ್ತಾನ ನಿರ್ಜನವಾಗಿರುವ ನಡುವೆಯೇ ತಾಲಿಬಾನಿಗಳು ಇದೀಗ ಸರ್ಕಾರಿ ನೌಕರರಿಗೆ ಕ್ಷಮಾದಾನ ಕೊಟ್ಟಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಹೆಣ್ಣುಮಕ್ಕಳು ಹೊರಗಡೆ ಬರುವಂತಿಲ್ಲ, ಬುರ್ಖಾ ಧರಿಸಿ ಮನೆಯಲ್ಲಿಯೇ ಇರಬೇಕು ಎಂದು ಇದಾಗಲೇ ಘೋಷಣೆ ಮಾಡಿರುವ ತಾಲಿಬಾನಿಗಳು ಸರ್ಕಾರದ ನೌಕರಿಯಲ್ಲಿರುವ ಪುರುಷರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ. ಆಡಳಿತ ಯಂತ್ರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ದೇಶದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ ಎಂದಿರುವ ತಾಲಿಬಾನಿಗಳು ಸರ್ಕಾರಿ ನೌಕರರಿಗೆ ಕ್ಷಮಾದಾನ ಮಾಡಿದ್ದೇವೆ. ಅವರು ಹೆದರುವ ಅಗತ್ಯವಿಲ್ಲ. ಧೈರ್ಯದಿಂದ ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿದ್ದಾರೆ.