

ಕಾಬುಲ್: ಅವರು ಬರುವುದನ್ನು ಕಾಯುತ್ತಾ ನಾನು ಇಲ್ಲಿ ಕುಳಿತಿದ್ದೇನೆ. ನನ್ನ ಗಂಡನ ಜತೆಗೆ ಕಚೇರಿಯಲ್ಲಿಯೇ ಕುಳಿತಿದ್ದೇನೆ. ಯಾವ ಸಂದರ್ಭದಲ್ಲಾದರೂ ಸಾಯಬಹುದು. ನನಗೆ ಮತ್ತು ನನ್ನ ಕುಟುಂಬಕ್ಕೆ ಸಹಾಯ ಮಾಡಲು ಯಾರೂ ಇಲ್ಲ. ನನ್ನಂತಹ ಮಹಿಳೆಯರನ್ನು ಅವರು ಕೊಂದು ಹಾಕಿದ್ದಾರೆ. ಈಗ ನಾನು ಅವರಿಗಾಗಿ ಕಾಯುತ್ತಿದ್ದೇನೆ....
ಹೀಗೆಂದು ಹೇಳಿದವರು ಅಫ್ಘಾನಿಸ್ತಾನದ ಮೊದಲ ಮತ್ತು ಕಿರಿಯ ಮಹಿಳಾ ಮೇಯರ್ ಜರಿಫಾ ಗಫಾರಿ! ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುವ ಮೊದಲು ತಾಲಿಬಾನಿಗಳು ಅಲ್ಲಿ ರಕ್ತದ ಹೊಳೆ ಹರಿಸಿದ್ದಾರೆ. ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ, ಅವರನ್ನು ಅಪಹರಣ ಮಾಡಿದ್ದಾರೆ. ಬುರ್ಖಾ ಧರಿಸದ ಹೆಣ್ಣುಮಕ್ಕಳನ್ನು ನಿರ್ದಯವಾಗಿ ಕೊಂದಿದ್ದಾರೆ. ಮಹಿಳೆಯರು ಹೊರಗೆ ಬರುವುದು, ಉದ್ಯೋಗ ಮಾಡುವುದು ಯಾವುದನ್ನೂ ಸಹಿಸದ ತಾಲಿಬಾನಿಗಳು ಮಹಿಳೆಯರು ಮನೆಯಲ್ಲಿಯೇ ಇರುವಂತೆ ಹೇಳಿದ್ದಾರೆ.
ಇಂಥ ರಕ್ತದ ಹೊಳೆಯನ್ನು ಕಂಡು ರೊಚ್ಚಿಗೆದ್ದಿರುವ ಅಫ್ಘಾನಿಸ್ತಾನದ ಮೊದಲ ಮತ್ತು ಕಿರಿಯ ಮಹಿಳಾ ಮೇಯರ್ 27 ವರ್ಷದ ಜರಿಫಾ ಗಫಾರಿ, ನಾನು ಎಲ್ಲಿಗೆ ಹೋಗಲಿ? ಕಚೇರಿಯಲ್ಲಿಯೇ ಕುಳಿತಿದ್ದೇನೆ. ಅಧ್ಯಕ್ಷರೇ ದೇಶ ಬಿಟ್ಟು ಪರಾರಿಯಾಗಿ ಹೋದರು. ನಮ್ಮನ್ನು ಕಾಪಾಡುವವರು ಯಾರು? ಅವರು ಇಲ್ಲಿಗೆ ಬಂದು ನನ್ನನ್ನು ಕೊಲ್ಲುವುದನ್ನೇ ಕಾಯುತ್ತಿರುವುದನ್ನು ಬಿಟ್ಟರೆ ನನ್ನ ಬಳಿ ಬೇರೆ ದಾರಿ ಇಲ್ಲ. ಈ ದೇಶದಲ್ಲಿ ಏನಾದರೂ ಸಾಧನೆ ಮಾಡಬೇಕು. ಜನರ ರಕ್ಷಣೆ ಮಾಡಬೇಕು. ಎಲ್ಲರಿಗೂ ಉತ್ತಮ ಭವಿಷ್ಯ ನೀಡಬೇಕು ಎಂದು ಕನಸು ಕಂಡಿದ್ದೆ. ಆದರೆ, ನಿರೀಕ್ಷೆಗಳು ಭಗ್ನವಾಗಿವೆ. ಆದ್ದರಿಂದ ಅಂತಿಮ ದಿನಕ್ಕಾಗಿ ಕಾಯುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಯಾವ ಸಂದರ್ಭದಲ್ಲಾದರೂ ಜೀವ ಹೋಗಬಹುದು ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಜರಿಫಾ.
ಜರಿಫಾ ಗಫಾರಿ 2018 ರಲ್ಲಿ ದೇಶದ ಮೈದಾನ್ ವಾರ್ಡಕ್ ಪ್ರಾಂತ್ಯದ ಮೊದಲ ಮತ್ತು ಕಿರಿಯ ಮಹಿಳಾ ಮೇಯರ್ ಆಗಿದ್ದಾರೆ. ಇದಾಗಲೇ ತಾಲಿಬಾನ್‌ಗಳಿಂದ ಜರಿಫಾ ಅವರಿಗೆ ಜೀವ ಬೆದರಿಕೆಗಳು ಬಂದಿದೆ. ಇವರ ತಂದೆ ಜನರಲ್ ಅಬ್ದುಲ್ ವಾಸಿ ಗಫಾರಿ ಅವರನ್ನು ಕಳೆದ ವರ್ಷ ನವೆಂಬರ್ 15 ರಂದು ಉಗ್ರರು ಕೊಂದಿದ್ದರು. ಜರಿಫಾ ಅವರನ್ನೂ ಕೊಲ್ಲುವ ಪ್ರಯತ್ನ ಮೂರು ಬಾರಿ ನಡೆದಿದೆ. ಆದ್ದರಿಂದ ಇಡೀ ದೇಶವೇ ತಾಲಿಬಾನಿಗಳ ವಶವಾಗಿರುವ ಕಾರಣ, ಈ ಅಸಹಾಯಕ ಮಾತುಗಳನ್ನಾಡಿದ್ದಾರೆ.