ಇಬ್ಬರು ಹೆಂಡಿರ ಗೌರಿಬಿದನೂರು ಗಂಡ! ವಿವಾಹಿತೆಗೂ ಮೋಸ ಮಾಡಿ ಮತ್ತೊಂದು ಮದ್ವೆ: ಪತಿಗಾಗಿ ಇಬ್ಬರ ಜಗಳ

fraud
Published on

ಚಿಕ್ಕಬಳ್ಳಾಪುರ: 'ನನಗೆ ಮೊದಲೇ ಮದ್ವೆಯಾಗಿತ್ತು. ಆದರೆ ನಿನ್ನ ಗಂಡನಿಗಿಂತ ಚೆನ್ನಾಗಿ ನೋಡ್ಕೋತೇನೆಂದು ತಲೆಕೆಡಿಸಿ ಗಂಡನಿಂದ ಡಿವೋರ್ಸ್​ ಕೊಡಿಸಿ ನನ್ನೊಟ್ಟಿಗೆ ಇದ್ದ. ಆಮೇಲೆ ಮದ್ವೆನೂ ಮಾಡ್ಕೊಂಡ. ಇದೀಗ ನಿನ್ನ ಜಾತಿ ಬೇರೆ ಎಂದು ಹೇಳಿ ಮೋಸ ಮಾಡಿದ್ದಾನೆ. ನನಗೆ ನ್ಯಾಯಬೇಕು' ಎಂದು ಚಿಕ್ಕಬಳ್ಳಾಪುರ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಗೌರಿಬಿದನೂರು ತಾಲೂಕಿನ  ಪವಿತ್ರಾ ಎಂಬಾಕೆಯೇ ಧರಣಿ ಕುಳಿತ ಮಹಿಳೆ. ತಾವು ಕೆಲಸ ನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹೋದ್ಯೊಗಿ ಮಂಜುನಾಥ್ (ಸಾದೇನಹಳ್ಳಿ ಗ್ರಾಮದ ಜಯಮ್ಮ ನಾರಾಯಣಸ್ವಾಮಿಯ ಮಗ) ವಂಚನೆ ಮಾಡಿರುವಾತ ಎಂದು ಅವರು ಆರೋಪಿಸಿದ್ದಾರೆ.

ಗಂಡನ ಮನೆಯ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ ಪವಿತ್ರಾ. ಮದುವೆಯಾದ ಒಂದೇ ತಿಂಗಳಿಗೆ ಗಂಡನಿಂದ ಡಿವೋರ್ಸ್​ ಕೊಡಿಸಿ ಈಗ ಅನ್ಯಾಯ ಮಾಡಿರುವುದಾಗಿ ಪವಿತ್ರಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಲಿವ್ ಇನ್ ರಿಲೇಷನ್‌ನಲ್ಲಿದ್ದ ತಾವು 2021ರ ಜೂನ್ ತಿಂಗಳಿನಲ್ಲಿ ಮದುವೆಯಾಗಿದ್ದೇವೆ. ಆದರೆ ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರು ಒಪ್ಪಿಕೊಂಡಿರಲಿಲ್ಲ. ಆದರೂ ಮಂಜುನಾಥ್​ ನನ್ನನ್ನು ಮದುವೆಯಾದ. ನಂತರ ಸ್ವಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿದ. ಆಕೆಯನ್ನೂ ಮದುವೆಯಾಗಲು ನಿರ್ಧರಿಸಿದ. ನಾನು ಇದಕ್ಕೆ ವಿರೋಧಿಸಿದಾಗ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆಕೆಯನ್ನು ಮದ್ವೆಯಾಗಿ ಈಗ ನನಗೆ ಮೋಸ ಮಾಡಿದ್ದಾನೆ ಎಂದು ಪವಿತ್ರಾ ದೂರಿದ್ದಾರೆ.

ಸ್ವಲ್ಪ ದಿನ ಎಲ್ಲವೂ ಚೆನ್ನಾಗಿತ್ತು. ಆದರೆ ಈಗ ಆತ ಮನೆಗೆ ಬರೋದನ್ನೇ ನಿಲ್ಲಿಸಿದ್ದಾನೆ. ನನಗೆ ಮೋಸ ಮಾಡಿದ್ದಾನೆ, ಮತ್ತೊಬ್ಬ ಪತ್ನಿಯ ಜತೆ ಇದ್ದಾನೆ. ನನಗೆ ನ್ಯಾಯ ಬೇಕು ಎಂದು ಪತಿ ವಾಸವಾಗಿರುವ ಮನೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ, ಎರಡನೆಯ ಪತ್ನಿ ಕೂಡ ಅಳಲು ತೋಡಿಕೊಂಡಿದ್ದು, ನನಗೂ ಗಂಡ ಬೇಕು, ನಾನು ಬಿಟ್ಟು ಕೊಡಲಾರೆ ಎಂದಿದ್ದಾರೆ.

ಆದರೆ ಪತಿ ಮಹಾಶಯ ಮಂಜುನಾಥ್​ ಹೇಳುತ್ತಿರುವುದು ಬೇರೆ. ನಾನು, ಪವಿತ್ರಾ ಪ್ರೀತಿಸಿದ್ದು ನಿಜ. ಆದರೆ ನನಗೆ ಬ್ಲ್ಯಾಕ್‌ಮೇಲ್ ಮಾಡಿ ಬಲವಂತವಾಗಿ ಪವಿತ್ರಾ ಕಡೆಯವರು ರಿಜಿಸ್ಟರ್ ಮದುವೆ ಮಾಡಿಸಿದ್ರು. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕಾನೂನು ಕ್ರಮ ಏನಿದೆ ಅದು ಆಗಲಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net