

ತಿರುವನಂತಪುರ (ಕೇರಳ): ಸುಶಿಕ್ಷಿತರ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳ ಇದೀಗ ಮತ್ತೊಂದು ದಾಖಲೆ ಬರೆದಿದೆ. ತನ್ನದೇ ಆದ ಸ್ವಂತ ಇಂಟರ್ನೆಟ್ ಹೊಂದಿದೆ. ಈ ಮೂಲಕ ಸ್ವಂತ ಇಂಟರ್ನೆಟ್ ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯ ಎಂಬ ಖ್ಯಾತಿಯನ್ನು ಗಳಿಸಿದೆ.
ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ನಮ್ಮ ರಾಜ್ಯದ ಪ್ರತಿಯೊಬ್ಬರಿಗೂ ಇಂಟರ್ನೆಟ್ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್‌ನ ಐಟಿ ಮೂಲಸೌಕರ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗೆ ದೂರಸಂಪರ್ಕ ಇಲಾಖೆಯು ಇಂಟರ್ನೆಟ್ ಸೇವಾ ಪೂರೈಕೆದಾರ (ಐಎಸ್ಪಿ) ಪರವಾನಗಿಯನ್ನು ನೀಡಿದೆ ಎಂದಿದ್ದಾರೆ.
ಕೇರಳದ ಹಿಂದಿನ ಸರ್ಕಾರವು 2019 ರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಿತ್ತು. ಜೊತೆಗೆ ಕೇರಳ ರಾಜ್ಯದಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಸರಿಯಾಗಿ ಕಲ್ಪಿಸಲು 1,548 ಕೋಟಿ ರೂಪಾಯಿ ಮೊತ್ತದ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ (KFON) ಎಂಬ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಈಗ ಆ ಯೋಜನೆಗೆ ಚಾಲನೆ ಸಿಕ್ಕಿದೆ.
ಕೆ-ಫೋನ್ ಅಥವಾ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ ಡಿಜಿಟಲ್ ಕೇರಳ ಸರ್ಕಾರದ ಹೊಸ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸರ್ಕಾರದ ಪ್ರಕಾರ ಈ ಯೋಜನೆಯಿಂದ ರಚಿಸಲಾದ ಮೂಲಸೌಕರ್ಯವು ಕೇರಳ ರಾಜ್ಯದ ಪ್ರಸ್ತುತ ಟೆಲಿಕಾಂ ಪರಿಸರ ವ್ಯವಸ್ಥೆಗೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮಾತ್ರವಲ್ಲದೇ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತ ಇಂಟರ್ನೆಟ್ ಸೌಲಭ್ಯ ಒದಗಿಸುವ ಗುರಿ ಸರ್ಕಾರಕ್ಕೆ ಇದೆ. (ಏಜೆನ್ಸೀಸ್)