ಹಿಂದೂ ಯುವತಿಯರ ಅಪಹರಣ, ಮತಾಂತರ: ಭಯಾನಕ ಸತ್ಯ ಬಾಯ್ಬಿಟ್ಟ ಪಾಕ್​ನ ಮಾಜಿ ಪಿಎಂ ಇಮ್ರಾನ್​ ಖಾನ್

imran
Published on

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಅಪಹರಣ ಮಾಡಿ ಅವರನ್ನು ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ದಶಕಗಳಿಂದಲೇ ಇಂಥದ್ದೊಂದು ಆರೋಪ ಕೇಳಿಬರುತ್ತಿದ್ದರೆ ಅದನ್ನು ಪಾಕಿಸ್ತಾನ ಅಲ್ಲಗಳೆಯುತ್ತಲೇ ಬಂದಿತ್ತು. ಪಾಕಿಸ್ತಾನದಲ್ಲಿನ ಈ ಹೇಳಿಕೆಗೆ ಭಾರತದಲ್ಲಿನ ಕೆಲವು ವರ್ಗವೂ ಬೆಂಬಲಿಸುತ್ತಲೇ ಬಂದಿತ್ತು. ಆದರೆ ಸತ್ಯ ಒಂದಿಲ್ಲೊಂದು ದಿನ ಬಹಿರಂಗಗೊಳ್ಳಲೇಬೇಕು ಎನ್ನುವುದಕ್ಕೆ ಸಾಕ್ಷಿಯಾಗಿದೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ ಈ ಮಾತು.

ಪಾಕಿಸ್ತಾನದಲ್ಲಿ ಯುವ ಮತ್ತು ಮುಸ್ಲಿಮೇತರ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗುತ್ತಿದೆ. ಹಿಂದೂ ಯುವತಿಯರನ್ನು ಅಪಹರಿಸಿ ಅವರನ್ನು ಬಲವಂತದಿಂದ ಮತಾಂತರಗೊಳಿಸಲಾಗುತ್ತಿದೆ ಎಂಬ ಬಗೆಗಿನ ಭಯಾನಕ ಸತ್ಯವನ್ನು ಇಮ್ರಾನ್​ ಖಾನ್​ ಬಾಯ್ಬಿಟ್ಟಿದ್ದಾರೆ.

ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ, ಅದರಲ್ಲಿಯೂ ಸಿಂಧ್​ ಪ್ರಾಂತ್ಯದ ಕಹಿ ವಾಸ್ತವವನ್ನು ಅವರು ತೆರೆದಿಟ್ಟಿದ್ದಾರೆ. ಸಿಂಧ್‌ನಲ್ಲಿ ಹಿಂದೂ ಹುಡುಗಿಯರ ಬಲವಂತದ ಮತಾಂತರ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಇದನ್ನು ತಾನು ಖಂಡಿಸುತ್ತಿದ್ದೇನೆ ಎಂದಿದ್ದಾರೆ.

ಕುರಾನ್​ನಲ್ಲಿ ಮತಾಂತರದ ಕುರಿತು ಇರುವುದಾಗಿ ಹೇಳಲಾಗುತ್ತಿದೆ. ಆದರೆ ಇದು ಸತ್ಯವಲ್ಲ ಎಂದು ಹೇಳಿದ ಇಮ್ರಾನ್​ ಖಾನ್​, ಕುರಾನ್​ನ ಒಂದು ಶ್ಲೋಕವನ್ನು ಹೇಳಿದರು. ಅದರಲ್ಲಿ ಇಸ್ಲಾಂನಲ್ಲಿ ಬಲವಂತಕ್ಕೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಬಲವಂತವಾಗಿ ಮತಾಂತರ ಮಾಡಬಾರದು ಎಂದು ಕುರಾನ್​ನಲ್ಲಿ ಹೇಳಲಾಗಿದೆ. ಇದು ಅಲ್ಲಾಹುವಿನ ಆಜ್ಞೆಯಾಗಿದೆ. ಒಂದು ವೇಳೆ ಯಾರಾದರೂ ಮುಸ್ಲಿಮೇತರರನ್ನು ಬಲವಂತವಾಗಿ ಮತಾಂತರಿಸಿದರೆ ಅಲ್ಲಾಹುವಿಗೆಗೆ ಅವಿಧೇಯರಾಗುತ್ತಾರೆ ಎಂದು ನುಡಿದರು.

2017 ರ ಜನಗಣತಿಯ ಪ್ರಕಾರ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯ 2 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ, ಅವರಲ್ಲಿ ಸುಮಾರು 90 ಪ್ರತಿಶತದಷ್ಟು ಜನರು ಭಾರತದ ಗಡಿಯಲ್ಲಿರುವ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಹಿಂದೂ ಯುವತಿಯರನ್ನು ಅದರಲ್ಲಿಯೂ ವಿಶೇಷವಾಗಿ ಅಲ್ಪಸಂಖ್ಯಾತ ಹಿಂದೂ ಹುಡುಗಿಯರ ಬಲವಂತದ ಮತಾಂತರದ ಬಗ್ಗೆ ಅನೇಕ ವರದಿಗಳಿವೆ. ಆದರೆ ಪಾಕಿಸ್ತಾನದ ಸರ್ಕಾರಗಳು ಮತ್ತು ರಾಜಕಾರಣಿಗಳು ಈ ವಿಷಯದಲ್ಲಿ ಯಾವಾಗಲೂ ಮೌನವಾಗಿದ್ದಾರೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಎಂದಿಗೂ ಕೆಲಸ ಮಾಡಲಿಲ್ಲ ಎಂದೂ ಇಮ್ರಾನ್​ ಇದೇ ವೇಳೆ ಆರೋಪಿಸಿದ್ದಾರೆ.

2021ರ ಅಕ್ಟೋಬರ್‌ನಲ್ಲಿ, ಅಲ್ಪಸಂಖ್ಯಾತ ಸಮುದಾಯಗಳ ಶಾಸಕರ ವಿರೋಧದ ಹೊರತಾಗಿಯೂ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಪ್ರಸ್ತಾಪಿಸಿದ ಕಾನೂನನ್ನು ವಿರೋಧಿಸಿದ ನಂತರ ಸಂಸತ್ತಿನ ಸಮಿತಿಯು ಬಲವಂತದ ಮತಾಂತರ ವಿರೋಧಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮತಿಸಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net