ಕೇಸರಿಧ್ವಜದ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರೋ ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

eshwarappa1
Published on

ನವದೆಹಲಿ: ಹಿಜಾಬ್ ಗಲಾಟೆ ವೇಳೆ ನಡೆದ ಘಟನೆಯೊಂದರಲ್ಲಿ ಕೇಸರಿ ಧ್ವಜದ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ಕಾಲೇಜಿನ ಧ್ವಜಸ್ತಂಭದ ಮೇಲೆ ಕೆಲ ಪುಂಡ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದರು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ವೇಳೆ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಆಪ್​ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಸಲ್ಲಿಸಿರುವ ದೂರಿನ ಅನ್ವಯ ದೂರು ದಾಖಲು ಮಾಡಲಾಗಿದೆ.

ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಕಾಂಗ್ರೆಸ್​ನವರು ಸುಳ್ಳು ಹೇಳುತ್ತಿದ್ದಾರೆ. ಆದರೆ ಅಲ್ಲಿ ಹಾಗೆ ನಡೆದಿಲ್ಲ. ಕೇಸರಿ ಧ್ವಜವನ್ನು ಎಲ್ಲಿ ಬೇಕಾದರೂ ಹಾಕಬಹುದು. ಇಂದಲ್ಲ ನಾಳೆ ಕೆಂಪು ಕೋಟೆಯಲ್ಲೂ ಕೇಸರಿ ಧ್ವಜ ಹಾರಬಹುದು. ಇವತ್ತೆ ಅಂತ ಹೇಳುತ್ತಿಲ್ಲ. ಮುಂದೊಂದು ದಿನ ಈ ಘಟನೆ ನಡೆಯಬಹುದು ಎಂದು ಈಶ್ವರಪ್ಪ ಹೇಳಿದ್ದರು. ಇವತ್ತು ದೇಶದಲ್ಲಿ ತ್ರಿವರ್ಣ ಧ್ವಜ ಇದೆ. ಅದಕ್ಕೆ ಎಲ್ಲರೂ ಗೌರವ ನೀಡಬೇಕು. ರಾಷ್ಟ್ರಧ್ವಜ ಗೌರವಿಸದವನು ರಾಷ್ಟ್ರದ್ರೋಹಿ ಆಗುತ್ತಾನೆ. ತ್ರಿವರ್ಣ ಧ್ವಜ ಹಾರಿಸಲು ಕೆಲವು ನಿಯಮಗಳಿವೆ. ಅದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದರು.

ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುವ ಹೇಳಿಕೆ ಕೊಟ್ಟಿರುವುದು ವಿವಾದಾತ್ಮಕ ಹೇಳಿಕೆ ಎಂದು ದೆಹಲಿಯಲ್ಲಿ ದೂರು ದಾಖಲು ಮಾಡಲಾಗಿದೆ.

ಇವರ ಈ ಹೇಳಿಕೆಗೆ ಕಾಂಗ್ರೆಸ್ ಅಧಿವೇಶನದ ವೇಳೆ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಕೂಡ ನಡೆಸಲಾಗಿತ್ತು. ತಮ್ಮ ಹೇಳಿಕೆ ಕುರಿತಂತೆ ಈಶ್ವರಪ್ಪನವರು ಸ್ಪಷ್ಟನೆ ನೀಡಿದ್ದರೂ ಅವರ ಹೇಳಿಕೆ ಅವರಿಗೆ ಭಾರಿ ಪೆಟ್ಟು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net