

ಮೊದಲು ಆತ, ತುಂಬಾ ಅನುಕಂಪ ತೋರಿಸಿ, ಒಳ್ಳೊಳ್ಳೆ ಮಾತನಾಡಿದರು. ನಾನು ನಂಬಿ ಪ್ರೀತಿಸತೊಡಗಿದೆ. ಅವನು ನಮ್ಮ ವಿಚಾರ ತನ್ನ ಹೆಂಡತಿಗೆ ಹೇಳಿರುವುದಾಗಿಯೂ ಅವಳು ಈ ನಮ್ಮ ಸಂಬಂಧವನ್ನು ಒಪ್ಪಿರುವುದಾಗಿಯೂ ತಿಳಿಸಿದ. ಆದರೆ ಯಾವುದೇ ಕಾರಣಕ್ಕೂ ದೇಹ ಒಪ್ಪಿಸಲಿಲ್ಲ. ಆದರೆ ಮನಸ್ಸನ್ನು ಒಪ್ಪಿಸಿಬಿಟ್ಟಿದ್ದೇನೆ. ನಂತರ ಅವನು ಯಾವುದೋ ಸಾಲ ತೀರಿಸಲು 70 ಸಾವಿರ ರೂಪಾಯಿ ಕೇಳಿದ. ನಾನು ಕೊಡಲಿಲ್ಲ.
ಅದರಿಂದ ಕೋಪಗೊಂಡು ನನ್ನನ್ನು ಮಾತನಾಡಿಸುವುದನ್ನೇ ಬಿಟ್ಟಿದ್ದಾನೆ. ನನಗೆ ತುಂಬ ದುಃಖವಾಗುತ್ತದೆ ಮೇಡಂ. ನಾನವನನ್ನು ಎಷ್ಟೊಂದು ಪ್ರೀತಿಸಿದೆ. ನನ್ನ ಮುಂದಿನ ಬದುಕಿಗೆ ಆಧಾರವಾಗುತ್ತಾನೆ ಎಂದು ನಂಬಿದೆ. ಈಗಂತೂ ದೂರವಾಗಿಯೇಬಿಟ್ಟಿದ್ದಾನೆ. ನನಗೀಗ ಹಗಲು ನೆಮ್ಮದಿಯಿಲ್ಲ, ರಾತ್ರಿ ನಿದ್ರೆಯಿಲ್ಲ. ಏನು ಮಾಡಲಿ ತಿಳಿಯುತ್ತಿಲ್ಲ.
ಉತ್ತರ:ನಿಮ್ಮ ಪತ್ರ ಓದಿ ನಿಜಕ್ಕೂ ಮನಸ್ಸು ಭಾರವಾಯಿತು. ಹದಿಹರೆಯದ ಹುಡುಗಿಯರು ಮುಗ್ಧರಾಗಿ ಗಂಡಿನ ಮಾತುಗಳಿಗೆ ಮರುಳಾಗುತ್ತಾರೆ. ಆದರೆ ನೀವು ಇಷ್ಟೆಲ್ಲ ಜೀವನದಲ್ಲಿ ಕಹಿ ಅನುಭವವನ್ನು ಪಡೆದು, ಮದುವೆಯಾಗಿ ಹೆಂಡತಿಯೊಡನೆ ಬಾಳ್ವೆ ನಡೆಸುತ್ತಿರುವ ಮನುಷ್ಯನ ಮಾತಿಗೆ ಮರುಳಾಗಿದ್ದಿರಲ್ಲ? ಏನೆನ್ನಲಿ? ಆದರೂ ನೀವು ಜಾಣೆ. ದೇಹ ಒಪ್ಪಿಸಲಿಲ್ಲ. ಅದಕ್ಕಾಗಿ ಅಭಿನಂಬಿಸುವೆ.
ನಾನು ಈ ಕಾಲಂ ಮೂಲಕ ಪದೇಪದೆ ಒಂದು ಎಚ್ಚರವನ್ನು ಮಹಿಳೆಯರಿಗೆ ಕೊಡುತ್ತಲೇ ಇರುತ್ತೇನೆ. `ಮದುವೆಯಾಗಿ ಹೆಂಡತಿ ಮತ್ತು ಮಕ್ಕಳ ಜತೆ ಜೀವನ ಮಾಡುತ್ತಿರುವ ಗಂಡಸು ನಿಮ್ಮ ಬದುಕಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದರೆ, ಅದಕ್ಕೆ ಅನುವು ಮಾಡಿಕೊಡಬೇಡಿ’ ಎಂದು. ಆದರೂ ಅಸಹಾಯಕತೆಯೋ, ಏಕಾಂಗಿತನವೋ ಬಹಳ ಮಹಿಳೆಯರು ಹೀಗೆ ಮರುಳಾಗಿ ನಂತರ ಪರಿತಪಿಸುತ್ತಾರೆ. ನೀವು ಸಹ ಅದೇ ತಪ್ಪನ್ನು ಮಾಡಲುಹೋಗಿ ಸ್ವಲ್ಪದರಲ್ಲಿಯೇ ಬಚಾವಾಗಿದ್ದೀರಿ.
ನಿಮಗೀಗ ಆತ ದೂರಾದನೆಂಬ ನೋವು ಮಾತ್ರವಿದೆ. ಅದನ್ನು ಸಹಿಸುವುದು ಕಷ್ಟ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಒಮ್ಮೆ ಯೋಚಿಸಿ, ಆತ ನಿಮ್ಮೊಡನೆ ದೇಹಸಂಪರ್ಕವನ್ನು ಬೆಳೆಸಿ, ನೀವೊಂದು ಮಗುವಿನ ತಾಯಿಯಾಗುವ ಸ್ಥಿತಿಗೆ ತಂದಿತ್ತು, ನಿಮ್ಮ ಹಣವನ್ನು ಪಡೆದು ಪರಾರಿಯಾಗಿದ್ದರೆ, ನೀವು ಎಷ್ಟೊಂದು ನೋವನ್ನು ಅನುಭವಿಸಬೇಕಾಗಿತ್ತಲ್ಲವೇ?
ಇಂಥದ್ದೇನೂ ಆಗಿಲ್ಲವಲ್ಲ? ಖುಷಿಪಡಬಹುದು ಅಲ್ಲವೇ? ನಿಮ್ಮ ವಯಸ್ಸಿಗೆ ಮರುಮದುವೆ ಆಗುವುದು ಅಗತ್ಯವಿದೆ. ಆದರೆ ಸರಿಯಾದವರನ್ನು ಆರಿಸಿ. ಜಗತ್ತಿನಲ್ಲಿ ಇನ್ನು ಒಳ್ಳೆಯ ಪುರುಷರಿದ್ದಾರೆ. ನಿಮಗೂ ಅಂಥವರು ಸಿಗಬಹುದು.