ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

negative
Published on

ಬೆಂಗಳೂರು: ಕರೊನಾ ಕಾರಣದಿಂದಾಗಿ ಪ್ರಯಾಣವನ್ನು ನಿಷೇಧ ಮಾಡಿದ್ದರೆ, ಕೆಲವು ರಾಜ್ಯಗಳಿಗೆ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ , ಹೊರ ರಾಜ್ಯಗಳಿಗೆ ಪ್ರಯಾಣ ಮಾಡುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ.

ಆದರೆ ಈಗ ಬಹುತೇಕ ಮಂದಿ ಪಾಸಿಟಿವ್‌ ಸೋಂಕಿತರು ಇರುವ ಕಾರಣ, ಅವರಿಗೆ ಹೊರ ರಾಜ್ಯಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಆದರೂ ಹೇಗಾದರೂ ಹೋಗುವ ಧಾವಂತ ಅವರಿಗೆ. ಇಂಥವರನ್ನೇ ಬಂಡವಾಳವಾಗಿಸಿಕೊಂಡು ಪಾಸಿಟಿವ್‌ ಇದ್ದರೂ ನೆಗೆಟಿವ್‌ ವರದಿ ನೀಡುವ ಇಲ್ಲವೇ ಚೆಕ್‌ ಮಾಡದೆಯೇ ನೆಗೆಟಿವ್‌ ವರದಿ ನೀಡುವ ಖದೀಮರ ಗುಂಪು ಸೃಷ್ಟಿಯಾಗಿವೆ.

ಅಂಥ ಗುಂಪುಗಳಲ್ಲಿ ಒಂದು ಗುಂಪಿನ ಕಿಂಗ್‌ಪಿನ್‌ ಈಗ ಸಿಕ್ಕಿಬಿದ್ದಿದ್ದಾನೆ, ಹೊರ ರಾಜ್ಯದ ಪ್ರಯಾಣಕ್ಕೆ ನಕಲಿ ರಿಪೋರ್ಟ್‌ ನೀಡುತ್ತಿದ್ದ ಗುಂಪಿನ ಕಿಂಗ್‌ಪಿನ್‌ ಸಂಪತ್ ಲಾಲ್ (35) ಎನ್ನುವವರನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಈತ ಅಕ್ಕಿಪೇಟೆ ನಿವಾಸಿ. ಮತ್ತೊಬ್ಬ ಆರೋಪಿ‌ ಎಸ್ಕೇಪ್ ಆಗಿದ್ದಾನೆ.

ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಕ್ಕೆ ಹೋಗುವವರಿಗೆ ನಕಲಿ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಈತ. ನಕಲಿ‌ ವೈದ್ಯರ ಹೆಸರು, ಸೀಲ್, ವೈದ್ಯರಿಂದ ದೃಢೀಕರಣದ ರೀತಿ ರಿಪೋರ್ಟ್ ತಯಾರಿಸಿ ಕೊಡುತ್ತಿತ್ತು ಈ ಜಾಲ. ಒಂದು ನಕಲಿ ನೆಗೆಟಿವ್ ರಿಪೋರ್ಟ್‌ಗೆ 3 ರಿಂದ 4 ಸಾವಿರ ರೂ.ಪಡೆಯಲಾಗುತ್ತಿತ್ತು. 15 ದಿನಗಳಲ್ಲಿ ಅನೇಕ ಪ್ರಯಾಣಿಕರಿಗೆ‌ ನಕಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೊಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಮೂರು ನಕಲಿ ಕೋವಿಡ್ ನೆಗಿಟಿವ್ ಸರ್ಟಿಫಿಕೇಟ್, ಒಂದು ಮೊಬೈಲ್ ಸೀಜ್ ಮಾಡಲಾಗಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ. ನಕಲಿ ನೆಗೆಟಿವ್ ರಿಪೋರ್ಟ್ ಬಳಕೆ ಬಗ್ಗೆ ಆಯಾ ರಾಜ್ಯದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದೆ.

ಈತ ಮೊದಲು ರೈಲ್ವೆ ಮತ್ತು ವಿಮಾನ ಟಿಕೆಟ್ ಬುಕ್ ಮಾಡ್ತಿದ್ದ. ಇದೀಗ ಈ ದಂಧೆ ಶುರು ಹಚ್ಚಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net