More

    ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?

    ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?ನನ್ನ ತಂದೆ ತಾಯಿಯದ್ದು ಅಂತರ್ಜಾತಿ ವಿವಾಹ. ತುಂಬಾ ಅನ್ಯೋನ್ಯವಾಗಿದ್ದಾರೆ. ನಾನೀಗ ಬೇರೆ ಜಾತಿಯವಳನ್ನು ಪ್ರೀತಿಸುತ್ತಿದ್ದೇನೆ. ಆದರೆ ನನ್ನ ತಾಯಿ ಅಡ್ಡಿ ಮಾಡುತ್ತಿದ್ದಾರೆ. ನಾನು ನಮ್ಮ ತಾಯಿಯನ್ನು ನೀವು ಅಂತರ್ಜಾತಿ ವಿವಾಹವನ್ನು ಮಾಡಿಕೊಂಡಿಲ್ಲವೇ? ಎಂದರೆ, ನಮ್ಮ ಮಾವಂದಿರು ಹೇಳುವುದೇ ಬೇರೆ. ನಮ್ಮ ತಾಯಿಯ ಹಳ್ಳಿಯಲ್ಲಿ ಯಾರಿಗೂ ನನ್ನ ತಂದೆಯ ಜಾತಿಯ ಬಗ್ಗೆ ಹೇಳಿಯೇ ಇಲ್ಲವಂತೆ. ಅಲ್ಲಿಯ ಹಿರಿಯರು ನಮ್ಮಪ್ಪನನ್ನು ತಮ್ಮದೇ ಜಾತಿಯವರು ಎಂದು ನಂಬಿದ್ದಾರಂತೆ.

    ಈಗ ನಾನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ಹಳ್ಳಿಯಲ್ಲಿ ನಮ್ಮ ನೆಂಟರಿಗೆಲ್ಲಾ ಮರ್ಯಾದೆ ಹೋಗುವುದಂತೆ. ನಾನು ಇಷ್ಟಪಡುತ್ತಿರುವ ಹುಡುಗಿಯ ನೆಂಟರು ನಮ್ಮಮ್ಮನ ಹಳ್ಳಿಯಲ್ಲಿರುವುದರಿಂದ ಜಾತಿಯನ್ನು ಮುಚ್ಚಿಟ್ಟು ಮದುವೆ ಮಾಡಲಾಗುವುದಿಲ್ಲವಂತೆ. ನನಗೀಗ ನಿಜಕ್ಕೂ ಸಂದಿಗ್ಧವಾಗಿದೆ. ಏನೂ ಅರಿಯದ ಹುಡುಗಿಯನ್ನು ನಾನಾಗಿಯೇ ಮದುವೆಗೆ ಪ್ರಪೋಸ್ ಮಾಡಿ ಈಗ ಅವಳನ್ನು ನಡುನೀರಿನಲ್ಲಿ ಕೈಬಿಡುವುದೇ? ಅಥವಾ ಜಾತಿಯ ಹಠಕ್ಕೆ ಬಿದ್ದಿರುವ ನನ್ನಮ್ಮನ ಈ ನೆಂಟರನ್ನು ನಿರ್ಲಕ್ಷಿಸುವುದೇ? ನನ್ನಮ್ಮನೋ ನೀನು ಈ ಹುಡುಗಿಯನ್ನು ಮದುವೆಯಾದರೆ ನಾನು ಸಾಯುತ್ತೇನೆ ಎಂದು ಹೆದರಿಸುತ್ತಾರೆ! ಏನು ಮಾಡಲಿ? ದಯವಿಟ್ಟು ತಿಳಿಸಿ.

    ಉತ್ತರ: ನಿಮ್ಮ ಈ ಪುಟ್ಟ ಪತ್ರದ ಆಧಾರದ ಮೇಲೇ ನಾನು ಒಂದಿಷ್ಟು ಪ್ರಶ್ನೆಗಳನ್ನು ಎತ್ತುತ್ತೇನೆ. ನೀವೂ ಅದನ್ನು ನಿಮ್ಮ ಮನಸ್ಸಿಗೆ ಕೇಳಿಕೊಂಡು ಉತ್ತರಕ್ಕಾಗಿ ಪ್ರಯತ್ನಿಸಿ. ಬೇರೆ ಜಾತಿಯವನನ್ನು ಮದುವೆಯಾದ ನಿಮ್ಮಮ್ಮನಿಗೆ ಈಗ ಜಾತಿಯ ಪ್ರಶ್ನೆ ಎತ್ತುವ ಹಕ್ಕೆಲ್ಲಿದೆ? ತನಗಾದರೆ ಒಂದು ಧರ್ಮ, ಮಗನಿಗಾದರೆ ಒಂದು ಧರ್ಮ ಎನ್ನುವುದು ಎಷ್ಟು ಸರಿ? ತಾನೇ ಪ್ರೇಮವಿವಾಹ ಮಾಡಿಕೊಂಡಿರುವ ನಿಮ್ಮಮ್ಮನಿಗೆ ಗಂಡು ಹೆಣ್ಣಿನ ಪ್ರೇಮದ ಸೆಳೆತ ಮತ್ತು ಅದರಿಂದಾಗುವ ನಿರಾಸೆಯ ಬಗ್ಗೆ ತಿಳಿದಿಲ್ಲವೇ? ನಿಮ್ಮ ತಾಯಿಯನ್ನು ನಿಮ್ಮ ತಂದೆ ಪ್ರೀತಿಸಿದಾಗ, ನಿಮ್ಮ ತಂದೆಯ ನೆಂಟರು ಹೀಗೇ ವರಾತ ತೆಗೆದಿದ್ದರೇ?

    ಹಾಗೆ ತೆಗೆದಿದ್ದರೂ ನಿಮ್ಮ ತಂದೆ ನಿಮ್ಮ ತಾಯಿಯನ್ನು ಮದುವೆಯಾಗಿ ಪ್ರೇಮಕ್ಕೆ ನಿಷ್ಠೆಯನ್ನು ತೋರಿಸಿದ್ದಾರಲ್ಲವೇ? ಅವರು ಬೇರೆ ಜಾತಿಯವರನ್ನು ಮದುವೆಯಾಗಿ ಬೇರೆಯದೇ ಊರಿನಲ್ಲಿ ಸಂಸಾರ ನಡೆಸಿದಂತೆ ನೀವೂ ನಿಮ್ಮ ತಾಯಿಯವರ ಹಳ್ಳಿಯ ಜನಕ್ಕೆ ಸುಳಿವು ಸಿಕ್ಕದಂತೆ ಮದುವೆಯಾಗಿ ಬೇರೆಯದೇ ಊರಿನಲ್ಲಿ ಸಂಸಾರ ನಡೆಸಬಹುದಲ್ಲವೇ? ಇಷ್ಟೆಲ್ಲಾ ಪ್ರಶ್ನೆಗಳನ್ನು ನಿಮ್ಮ ತಾಯಿಗೆ ಅರ್ಥವಾಗುವಂತೆ ಹೇಳಿ, ಹೆಣ್ಣಾದ ಆಕೆ ಮತ್ತೊಂದು ಹೆಣ್ಣಿಗೆ ಅನ್ಯಾಯ ಮಾಡಬಾರದೆಂಬ ತಿಳುವಳಿಕೆ ಮೂಡಿಸುವುದು ಈಗ ನಿಮ್ಮದೇ ಕರ್ತವ್ಯ. ಮತ್ತು ನಿಮ್ಮ ಮಾವಂದಿರನ್ನೂ ಕೇಳಿ ನಿಮ್ಮ ತಂದೆಯ ಜಾತಿಯನ್ನು ತಮ್ಮ ಹಳ್ಳಿಯ ಹಿರಿಯರಿಗೆ ಹೇಳದೇ ಅವರು ಮೋಸಮಾಡಿಲ್ಲವೇ? ಆ ಮೋಸವನ್ನು ನೀವು ಮಾಡದೇ ಇರುವುದರಿಂದ ಅವರು ನಿಮ್ಮ ಆಯ್ಕೆಯನ್ನು ಗೌರವಿಸಬೇಕಲ್ಲವೇ? ಅಥವಾ ನೀವೂ ಅವರ ಹಾಗೇ ಮೋಸದಿಂದ ಸುಳ್ಳು ಹೇಳಿ ಮದುವೆಯಾದರೆ ಅವರೇನು ಮಾಡುತ್ತಾರೆ? ಈ ವಿಷಯಗಳನ್ನು ಅವರಿಗೆ ಅರ್ಥವಾಗುವಂತೆ ತಿಳಿಸಿ. ಇನ್ನು ನಿಮ್ಮ ತಂದೆಯ ವಿಚಾರಕ್ಕೆ ಬರೋಣ. ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರಲ್ಲವೆಂದು ನೀವೇ ಬರೆದಿದ್ದೀರಿ.

    ಆದರೂ ಧೈರ್ಯವಾಗಿ ತಾವು ಪ್ರೀತಿಸಿದ ಹೆಣ್ಣನ್ನು ಮದುವೆಯಾದರಲ್ಲ? ಕಡಿಮೆ ವಿದ್ಯಾವಂತರಿಗೆ ಇದ್ದ ಧೈರ್ಯ ಹೆಚ್ಚು ವಿದ್ಯಾವಂತರಾದ ನಿಮಗೇಕಿಲ್ಲ? ನ್ಯಾಯವಾಗಿ ನೀವು ಇನ್ನೂ ಹೆಚ್ಚಿನ ಕೆಚ್ಚಿನಿಂದ ಇದು ನನ್ನ ಬದುಕು ಎಂದು ನಿಮ್ಮ ಹಳ್ಳಿಯ ಎಲ್ಲರಿಗೂ ಉತ್ತರಿಸಬಹುದಿತ್ತು. ಈ ಹುಡುಗಿಯನ್ನು ಮದುವೆಯಾಗಲು ನೀವೆಲ್ಲಾ ಒಪ್ಪದಿದ್ದರೆ , ನಾನು ಜೀವನ ಪರ್ಯಂತ ಮದುವೆಯೇ ಇಲ್ಲದೇ ಹಾಗೇ ಉಳಿದುಬಿಡುತ್ತೇನೆ ಎಂದು ಸಿನಿಮಾ ಮಾದರಿಯಲ್ಲಿ ಒಂದು ಧಮಕಿಯನ್ನು ಹಾಕಬಹುದಿತ್ತು. ನಿಮ್ಮ ವಿದ್ಯೆ ನಿಮಗೆ ಧೈರ್ಯವನ್ನೂ ವಿವೇಕವನ್ನೂ ಜಾಣತನವನ್ನೂ ತಂದುಕೊಡಬೇಕಿತ್ತಲ್ಲವೇ? ತೀರಾ ವಿವೇಕ ಶೂನ್ಯರೂ ಅಸೂಕ್ಷ್ಮರೂ ವ್ಯವಹರಿಸುವ ಮತ್ತು ಚಿಂತಿಸುವ ರೀತಿಯಲ್ಲಿ ನಾನು ಈ ಹುಡುಗಿಯನ್ನು ಮದುವೆಯಾದರೆ ನನ್ನಮ್ಮ ಸಾಯುತ್ತಾರೆ ಎಂದು ಕೊರಗುತ್ತಿದ್ದೀರಲ್ಲ? ಅದನ್ನು ತಪ್ಪಿಸುವ ಜಾಣತನ ನಿಮಗೆ ಖಂಡಿತಾ ಇರಬೇಕು. ಸ್ವಲ್ಪ ಜೀವನ ಕೌಶಲ ಕಲಿಯಿರಿ. ಅದರ ಮೊದಲ ಪಾಠವೇ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ ಎನ್ನುವುದು. ಬದುಕು ಎನ್ನುವುದೇ ಅನಂತ ಸಮಸ್ಯೆಗಳ ಮಹಾಪೂರ. ನಮಗೆ ಭಗವಂತ ಇಂಥಾ ಪ್ರವಾಹದ ವಿರುದ್ಧ ಈಜಿ ಗೆಲ್ಲಲ್ಲು ಮೆದುಳು ಎನ್ನುವ ಅಸ್ತ್ರವನ್ನು ಕೊಟ್ಟಿದ್ದಾನೆ. ದಯವಿಟ್ಟು ಅದನ್ನು ಸಾಣೆಹಿಡಿಸಿಕೊಂಡು ನಿಷಿತಮತಿಯಾಗಿ.

    ಖಂಡಿತಾ ಒಂದಲ್ಲಾ ಒಂದು ದಾರಿ ತೆರೆಯುತ್ತದೆ. ಪ್ರೀತಿ ಮಾಡಬಾರದು; ಮಾಡಿದರೆ ಜಗಕೆ ಹೆದರಬಾರದು ಎನ್ನುವ ಚಿತ್ರಗೀತೆಯನ್ನು ನೀವೂ ಕೇಳಿದ್ದಿರಿ ಅಂದುಕೊಳ್ಳುತ್ತೇನೆ. ಈಗ ಇಂಥಾ ಹೆದರಿಕೆಯಿಲ್ಲದ, ಧೈರ್ಯದ ನಡೆ ನಿಮ್ಮದಾಗಬೇಕು. ಪ್ರಯತ್ನಿಸಿ. ನಿಮಗೆ ಶುಭವಾಗಲಿ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?

    ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…

    ಗಂಡ ಸೆಕ್ಸ್‌ಗೆ ಒಪ್ಪುತ್ತಿಲ್ಲ, ಕಂಡರೆ ಅಸಹ್ಯ ಪಡ್ತಾರೆಂದು ಅಳುತ್ತಾ ಕೂರುವ ಬದಲು ಕಾರಣವೂ ತಿಳಿಯಬೇಕಲ್ವಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts