ಪತ್ನಿಯಿಂದ ದೂರವಿರಲು ನಕಲಿ ಕೋವಿಡ್‌ ರಿಪೋರ್ಟ್‌ ಕೊಟ್ಟ ನವವಿವಾಹಿತ - ಮುಂದಾದದ್ದು ದುರಂತ!

covid
ಸಾಂದರ್ಭಿಕ ಚಿತ್ರ
Published on

ಇಂದೋರ್: ಪತ್ನಿಯಿಂದ ದೂರವಿರಲು 26 ವರ್ಷದ ನವವಿವಾಹಿತನೊಬ್ಬ ಕೋವಿಡ್‌ ನಕಲಿ ರಿಪೋರ್ಟ್‌ ತಯಾರಿಸಿ ಇದೀಗ ಸಿಕ್ಕಿ ಬಿದ್ದಿದ್ದಾನೆ!

ಇತ್ತೀಚಿಗಷ್ಟೇ ಮದುವೆಯಾಗಿರುವ ಮಧ್ಯ ಪ್ರದೇಶದ ಮಹೌ ನಿವಾಸಿ, 26 ವರ್ಷದ ಉದ್ಯಮಿ ಇಜಾಜ್‌ ಅಹಮ್ಮದ್‌ ಎಂಬಾತ ತನಗೆ ಕರೊನಾ ಪಾಸಿಟಿವ್ ಆಗಿದೆ ಎಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಮನೆಗೆ ಕಳುಹಿಸಿದ್ದಾನೆ. ಇದನ್ನು ಆತ ವೆಬ್‌ಸೈಟ್ ಒಂದರಿಂದ ಡೌನ್‌ಲೋಡ್‌ ಮಾಡಿಕೊಂಡಿದ್ದಾನೆ. ಕೋವಿಡ್‌ ವರದಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡು ನಂತರ ಅದರ ಪ್ರಿಂಟ್‌ಔಟ್‌ ತೆಗೆದು ಅದರ ಫೋಟೋ ಅನ್ನು ತನ್ನ ಪತ್ನಿ ಮತ್ತು ತಂದೆಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದಾನೆ.

ಈ ಸಮಯದಲ್ಲಿ ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದ ಆತ ಅದ್ಯಾವುದೋ ಕಾರಣಕ್ಕೆ ಈ ಹೊಸ ಪತ್ನಿಯಿಂದ ದೂರವಿರುವ ತೀರ್ಮಾನ ಮಾಡಿದ್ದಾನೆ. ಅದಕ್ಕಾಗಿ ಕೋವಿಡ್‌ ರಿಪೋರ್ಟ್‌ ಒಳ್ಳೆಯ ಮಾರ್ಗ ಎಂದುಕೊಂಡಿದ್ದಾನೆ.

ಇತ್ತ ನಕಲಿ ರಿಪೋರ್ಟ್‌ ನೋಡಿದ ಕುಟುಬಂಸ್ಥರು ಮೊದಲು ಶಾಕ್‌ ಆಗಿದ್ದಾರೆ. ಆದರೆ ಕೆಲಸದ ನೆಪ ಹೇಳಿ ಆತ ಮನೆ ಬಿಟ್ಟು ಹೋಗಿದ್ದು, ಆರೋಗ್ಯವಂತನಾಗಿಯೇ ಇದ್ದರೂ ಕೋವಿಡ್‌ ವರದಿ ಬಂದಿರುವುದು ಎಲ್ಲವೂ ಗೊಂದಲವಾಗಿ ಕಂಡಿದೆ ಮನೆಯವರಿಗೆ. ಯಾವುದೇ ಲಕ್ಷಣ ಇಲ್ಲದಿದ್ದರೂ ಇದು ಹೇಗೆ ಸಾಧ್ಯವಾಯಿತು ಎಂದುಕೊಂಡ ಪತ್ನಿ ಹಾಗೂ ಪಾಲಕರು, ನಂತರ ಆ ವರದಿಯಲ್ಲಿರುವ ಪ್ರಯೋಗಾಲಯಕ್ಕೆ ಕರೆ ಮಾಡಿ ವಿಷಯ ಸಂಗ್ರಹಿಸಿದ್ದಾರೆ. ಅಲ್ಲಿ ಈ ಹೆಸರಿನ ಯಾರಿಗೂ ವರದಿ ನೀಡಲಿಲ್ಲ ಎಂಬ ಮಾಹಿತಿ ಬಂದಿದೆ.

ನಂತರ ಈತನ ಮೋಸದಾಟ ಬಯಲಾಗಿದೆ. ಮನೆಯವರು ಸುಮ್ಮನಾಗುತ್ತಿದ್ದರೇನೋ. ಆದರೆ ಆಸ್ಪತ್ರೆಯ ಪ್ರಯೋಗಾಲಯದವರು ಸುಮ್ಮನಿರಬೇಕಲ್ಲ. ನಕಲಿ ವರದಿ ತಯಾರಿ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಛೋಟಿ ಗ್ವಾಲ್‍ಟೋಲಿ ಪೊಲೀಸ್ ಠಾಣೆಯಲ್ಲಿ ಇಜಾಜ್‌ ವಿರುದ್ಧ ನಕಲಿ ರಿಪೋರ್ಟ್‌ ತಯಾರಿಕೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲಾಗಿದೆ. ಸದ್ಯ ನಾಪತ್ತೆಯಾಗಿದ್ದು, ತನ್ನ ಅನ್ಯ ಕೆಲಸವನ್ನು ನಿರಾತಂಕಮಾಡಿಕೊಂಡಿರುವ ಇಜಾಜ್‌ ಎಲ್ಲಿದ್ದಾನೆ ಎಂದು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ! ಜತೆಗೆ, ಪೊಲೀಸರ ಮುಂದೆ ಹಾಜರಾಗುವಂತೆ ಈತನಿಗೆ ನೋಟಿಸ್ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net