

ನ್ಯೂಯಾರ್ಕ್: ಮಾಜಿ ಭುವನ ಸುಂದರಿ, ಅಮೆರಿಕದ ಒಲಿವಿಯಾ ಕಲ್ಬೋ ಅವರಿಗೆ ಮೆಕ್ಸಿಕೋ ವಿಮಾನ ನಿಲ್ದಾಣದಲ್ಲಿಯೇ ಭಾರಿ ಆಘಾತವಾಗುವಂಥ ಘಟನೆ ನಡೆದಿದ್ದು, ಈ ಬಗ್ಗೆ ಅವರ ಸಹೋದರಿ ಅರೋರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2012ರಲ್ಲಿ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದ್ದ ಒಲಿವಿಯಾಗೆ ಮೆಕ್ಸಿಕೋದಲ್ಲಿ ವಿಮಾನ ಹತ್ತಲು ಬಿಡಲಿಲ್ಲ. ಇದಕ್ಕೆ ಕಾರಣ ಆಕೆ ಧರಿಸಿದ್ದ ಡ್ರೆಸ್! ತನ್ನ ಸಹೋದರಿ ಮತ್ತು ಗೆಳೆಯನೊಂದಿಗೆ ಕ್ಯಾಬೊ ಸ್ಯಾನ್ ಲೂಕಾಸ್ ಎಂಬ ರೆಸಾರ್ಟ್‌ಗೆ ತೆರಳುತ್ತಿದ್ದ ಈ ಸುಂದರಿಯನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಡೆದುನಿಲ್ಲಿಸಿದ್ದಾರೆ. ದೇಹವನ್ನು ಸರಿಯಾಗಿ ಮುಚ್ಚುವ ಡ್ರೆಸ್ ಹಾಕಿಕೊಂಡು ಬಂದು, ನಂತರ ವಿಮಾನ ಹತ್ತಿ, ಇಲ್ಲದಿದ್ದರೆ ಹೊರಕ್ಕೆ ಹೋಗಿ ಎಂದಿದ್ದಾರೆ!
ಒಲಿವಿಯಾ, ಕಪ್ಪು ಕ್ರಾಪ್ ಟಾಪ್, ಸೈಕ್ಲಿಂಗ್ ಶಾರ್ಟ್ಸ್ ಮತ್ತು ಮ್ಯಾಚಿಂಗ್ ಲಾಂಗ್ ಸ್ವೆಟರ್ ಧರಿಸಿದ್ದರು. ಮೇಲುಗಡೆಯ ಬಟ್ಟೆ ಅಸಭ್ಯ ರೀತಿಯಲ್ಲಿ ಇದೆ ಎಂದು ಹೇಳಿದ ಮೆಕ್ಸಿಕೋದಲ್ಲಿರುವ ಅಮೆರಿಕನ್ ಏರ್‌ಲೈನ್ಸ್‌ನ ಗೇಟ್ ಏಜೆಂಟ್ ಅವರಿಗೆ ಸಭ್ಯ ಡ್ರೆಸ್ ಧರಿಸಿ ಬರಲು ಹೇಳಿದ್ದಾರೆ. ಮೇಲುಗಡೆ ಬ್ಲೌಸ್ ಹಾಕಿ ಬನ್ನಿ, ಬೋರ್ಡಿಂಗ್ ಮಾಡುವ ಮುನ್ನ ದೇಹ ಮುಚ್ಚುವಂಥ ಡ್ರೆಸ್ ಮಾಡಿ, ಇಲ್ಲವೇ ಬೋರ್ಡಿಂಗ್ ಮಾಡದೇ ಹೊರಗೆ ಹೋಗಿ ಅಂದಿದ್ದಾರೆ.
ಅವರ ಸಹೋದರಿ ಅರೋರಾ ಕಲ್ಪೋ ಇದನ್ನು ಜಾಲತಾಣದಲ್ಲಿ ಹಂಚಿಕೊಂಡು ಕಿಡಿ ಕಾರಿದ್ದಾರೆ. ನೋಡಿ ನನ್ನ ಅಕ್ಕ ಈ ಡ್ರೆಸ್‌ನಲ್ಲಿ ಎಷ್ಟೊಂದು ಮುದ್ದಾಗಿ ಕಾಣುತ್ತಾಳೆ, ಇದು ಸರಿಯಿಲ್ಲ ಎಂದು ಏರ್‌ಲೈನ್ಸ್ ಸಿಬ್ಬಂದಿ ಹೇಳಿದ್ದಾರೆ. ಇದೇ ಏರ್‌ಪೋರ್ಟ್‌ನಲ್ಲಿ ಇನ್ನೊಬ್ಬಳು ಕೂಡ ಇಂಥದ್ದೇ ಡ್ರೆಸ್ ಹಾಕಿಕೊಂಡು ಬಂದಿದ್ದಳು. ನೀಲಿ ಕ್ರಾಪ್ ಟಾಪ್, ಲೆಗ್ಗಿಂಗ್ಸ್ ಮತ್ತು ಉದ್ದವಾದ ಕಾರ್ಡಿಜನ್ ಧರಿಸಿದ್ದಳು. ಅವಳಿಗೂ ಸಿಬ್ಬಂದಿ ಏನೋ ಹೇಳುತ್ತಿರುವುದು ಕೇಳಿಸಿತು. ಈ ವರ್ತನೆ ಸರಿಯಿಲ್ಲ ಅಲ್ಲವೇ ಎಂದು ಕೇಳಿದ್ದಾಳೆ. ಇದು ತುಂಬಾ ವಿಚಿತ್ರವಾಗಿದೆ ಎಂದಿದ್ದಾಳೆ.
ಈ ಬಗ್ಗೆ ಜಾಲತಾಣದಲ್ಲಿ ಪರ-ವಿರೋಧದ ಭಾರಿ ಚರ್ಚೆ ಶುರುವಾಗಿದೆ. ಹಲವರು ಇದು ಅಸಭ್ಯ ಡ್ರೆಸ್, ಏರ್‌ಲೈನ್ಸ್‌ನವರು ಹೇಳಿದ್ದು ಸರಿಯೆಂದರೆ, ಇನ್ನು ಕೆಲವರು ನಮ್ಮ ಬಟ್ಟೆ, ನಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದಿದ್ದಾರೆ. ಕೊನೆಗೆ ಈ ಭುವನ ಸುಂದರಿ ಸರಿಯಾದ ಡ್ರೆಸ್ ಹಾಕಿಕೊಂಡು ಬಂದರೋ ಇಲ್ಲವೋ ಎಂಬ ಮಾಹಿತಿಯನ್ನು ಸಹೋದರಿ ನೀಡಲಿಲ್ಲ.