ಕರೆಂಟೇ ಇಲ್ಲದಿದ್ರೂ ಬಂತು 36 ಸಾವಿರ ರೂ. ಬಿಲ್‌! ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ಅಂಗವಿಕಲ...

currentbill
Published on

ಮಹಾರಾಜಗಂಜ (ಪೂರ್ವಾಂಚಲ): ವ್ಯಕ್ತಿಯೊಬ್ಬರಿಗೆ ಕರೆಂಟ್​ ಸಂಪರ್ಕವನ್ನೇ ನೀಡದೇ 36 ಸಾವಿರ ರೂಪಾಯಿ ವಿದ್ಯುತ್​ ಬಿಲ್​ ಕಳುಹಿಸಿರುವ ಘಟನೆ ಪೂರ್ವಾಂಚಲದ ಮಹಾರಾಜಗಂಜದಲ್ಲಿ ನಡೆದಿದೆ.

ಮಹಾರಾಜಗಂಜ್‌ನ ಘುಘ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭುವನಿ ಗ್ರಾಮದ ಚುವಾನಿ ಟೋಲಾ ನಿವಾಸಿ ವಿಶೇಷಚೇತನ ಅರ್ಜುನ್ ಪ್ರಸಾದ್​ಗೆ ಬಿಲ್ ನೋಡಿ ಕಂಗಾಲಾಗಿ ಹೋಗಿದ್ದು, ಈ ಬಿಲ್‌ ನೋಡಿದ ತಕ್ಷಣ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ವಿದ್ಯುತ್‌ ಇಲಾಖೆ ಮೊರೆ ಹೋಗಿದ್ದಾರೆ.

2012ರಲ್ಲಿ ತಮ್ಮ ಗ್ರಾಮವನ್ನು ರಾಮ್ ಮನೋಹರ್ ಲೋಹಿಯಾ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ತಮ್ಮ ಜಾಗದಲ್ಲಿ ಶೌಚಗೃಹದ ನಿರ್ಮಾಣ ಕಾರ್ಯ ನಡೆದಿತ್ತು. ಆಗ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಗ್ರಾಮದ ಎಲ್ಲ ಮನೆಗಳಿಗೂ ವಿದ್ಯುತ್‌ ನೀಡುವ ಕಾಮಗಾರಿಯನ್ನು ಶುರು ಮಾಡಲಾಗಿತ್ತು. ಆಗ ಈ ನಡುವೆ ವಿದ್ಯುತ್‌ ಕಂಬಕ್ಕೆ ಸಂಪರ್ಕ ನೀಡದೇ ತಮ್ಮ ಮನೆಯ ಶೌಚಗೃಹಕ್ಕೂ ಮೀಟರ್‌ ಹಾಕಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೂ ವಿದ್ಯುತ್‌ ಬರಲಿಲ್ಲ. ಕರೆಂಟ್‌ ನೀಡುವಂತೆ ಹಲವಾರು ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಆದರೆ ಬಿಲ್‌ ಮಾತ್ರ ಬಂದಿದೆ ಎಂದು ಅರ್ಜುನ್ ಪ್ರಸಾದ್​ ಹೇಳಿದ್ದಾರೆ.

ಪ್ರತಿ ತಿಂಗಳೂ ಅರ್ಜುನ್‌ ಅವರಿಗೆ ಕರೆಂಟ್‌ ಬಿಲ್‌ ಬರುತ್ತಿತ್ತು. ಆದರೆ ವಿದ್ಯುತ್‌ ಮಾತ್ರ ನೀಡಿರಲಿಲ್ಲ. ಕರೆಂಟ್‌ ನೀಡುವಂತೆ ಪದೇ ಪದೇ ಮನವಿ ಮಾಡಿದರೂ ಅದು ಪ್ರಯೋಜನ ಆಗಿರಲಿಲ್ಲ. ಅಲ್ಲದೇ ತಮ್ಮ ಮನೆಗೆ ಕರೆಂಟ್‌ ಇಲ್ಲ, ಬಿಲ್‌ ಕಳುಹಿಸುತ್ತಿರುವ ಬಗ್ಗೆ 2012ರಿಂದ ಸುತ್ತದ ಜಾಗವಿಲ್ಲ. ಆದರೆ ಪ್ರಯೋಜನ ಆಗಲಿಲ್ಲ. ಆದರೆ ಈಗ ಒಟ್ಟಿಗೇ 36 ಸಾವಿರ ರೂಪಾಯಿ ಬಿಲ್‌ ಬಂದಿದೆ.

ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡು ಅದು ವರದಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಇ. ಹರಿಶಂಕರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net