VIDEO: ‘ಏನ್‌ ಕಥೇರಿ ನಿಮ್ದು.. ಅವ್ನು ನನ್ನ ಮಗ ಕಣ್ರೀ...’ ಬಿಜೆಪಿ ಮುಖಂಡನ ಕೆನ್ನೆಗೆ ಹೊಡೆದು ಬೇಸ್ತು ಬಿದ್ದ ರೈತ

BJP
Published on

ಉನ್ನಾವೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸದರ್​ ಕ್ಷೇತ್ರದ ಬಿಜೆಪಿ ಶಾಸಕ ಪಂಕಜ್​ ಗುಪ್ತಾ ಅವರು ಕಾರ್ಯಕ್ರಮವೊಂದರಲ್ಲಿ ಕುಳಿತಿದ್ದಾಗ ರೈತನೊಬ್ಬ ವೇದಿಕೆ ಮೇಲೇರಿ ಕೆನ್ನೆಗೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಥಹರೇವಾರಿ ಶೀರ್ಷಿಕೆಯೊಂದಿಗೆ ವೈರಲ್‌ ಆಗಿದೆ.

ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಗುಪ್ತಾ ಅವರನ್ನು ಹಿರಿಯ ವ್ಯಕ್ತಿಯೊಬ್ಬರು ಕೆನ್ನೆಗೆ ಹೊಡೆದಿದ್ದರು. ಅವರನ್ನು ರೈತರೆಂದು ಗುರುತಿಸಲಾಗಿದ್ದು, ವಿರೋಧ ಪಕ್ಷಗಳು ಭಾರಿ ಖುಷಿ ಪಟ್ಟುಕೊಂಡಿದ್ದರು. ರೈತರಿಗೆ ಬಿಜೆಪಿ ಎಂದರೆ ಆಗುವುದಿಲ್ಲ. ರೈತರಿಗೆ ಅನ್ಯಾಯ ಮಾಡುತ್ತಿರುವ ಈ ಪಕ್ಷವನ್ನು ಅವರಿಂದ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ರೈತನೋರ್ವ ಕಪಾಳಮೋಕ್ಷ ಮಾಡಿದ್ದು ತಕ್ಕಶಾಸ್ತಿಯಾಗಿದೆ ಎಂಬಂತೆ ಜಾಲತಾಣದಲ್ಲಿ ವಿಡಿಯೋ ಹರಿದಾಡತೊಡಗಿವೆ.

ಈ ವಿಡಿಯೋ ಹಾಗೂ ಅದರಲ್ಲಿನ ಮಾಹಿತಿ ನೋಡಿ ರೈತ ಬೇಸ್ತು ಬಿದ್ದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅವರು, ‘ಏನ್ರಿ ಇವೆಲ್ಲಾ... ನಾನು ರೈತ ನಿಜ, ನಾನು ಹೊಡೆದಿರುವವನು ಬಿಜೆಪಿ ಮುಖಂಡನೂ ನಿಜ. ಆದರೆ ಅವ್ನ ಬಗ್ಗೆ ನನಗೆ ಸಿಟ್ಟು ಇಲ್ಲ. ನಾನು ಅವನ ಅಂಕಲ್ಲು. ಅಂದ್ರೆ ಅವ್ನು ನನ್ನ ಮಗ ಇದ್ದಂಗೆ. ನಮ್ಮೂರಿಗೆ ಆತ ಬಂದದ್ದು ನೋಡಿ ಖುಷಿಯಿಂದ ಮಾಮೂಲಿ ಯಾವಾಗಲೂ ಮಾಡುವಂತೆ ಕೆನ್ನೆಗೆ ಹೊಡೆದಿದ್ದೇನೆ. ಮೊದಲಿನಿಂದಲೂ ಅವನನ್ನು ಪ್ರೀತಿ ಮಾಡುವುದು ಹೀಗೆ ಕೆನ್ನೆಗೆ ಹೊಡೆದೇ’ ಎಂದು ಹೇಳಿದ್ದಾರೆ.

ರೈತ ಕಳೆದ ಕೆಲ ದಿನಗಳ ಹಿಂದೆ ಕಾಣೆಯಾಗಿರುವ ಹಸುಗಳ ಬಗ್ಗೆ ಪೊಲೀಸ್ ಠಾಣೆ ಹಾಗೂ ಶಾಸಕರ ಮುಂದೆ ದೂರು ನೀಡಿದ್ದನಂತೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಸಿಟ್ಟುಗೊಂಡು ಬಿಜೆಪಿ ಮುಖಂಡನಿಗೆ ‘ಕಪಾಳಮೋಕ್ಷ’ ಮಾಡಿದ್ದಾನೆ ಎಂದೂ ಕೆಲವು ಕಡೆಗಳಲ್ಲಿ ಸುದ್ದಿ ಹರಿದಾಡಿದ್ದವು.

ಹೀಗೆ ಹೊಡೆದ ಮೇಲೂ ಗುಪ್ತಾ ಸುಮ್ಮನೇ ಸೈಲೆಂಟ್‌ ಆಗಿ ಇರುವುದರಿಂದ ನಾಚಿಕೆಯಾಗಿ ಹೀಗೆ ವರ್ತಿಸಿದ್ದಾರೆ, ರೈತರ ಎದುರು ಹೇಗೆ ಮುಖ ತೋರಿಸುತ್ತಾರೆ ಎಂದೂ ಕಮೆಂಟ್‌ ಮಾಡಲಾಗಿತ್ತು!

ಇಲ್ಲಿದೆ ನೋಡಿ ಅದರ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net