

ದುಬೈ: ತಮಗೆ ಹುಟ್ಟುವ ಮಗುವು ಗಂಡೋ, ಹೆಣ್ಣೋ ಎಂಬ ಕುತೂಹಲ ಪ್ರತಿಯೊಬ್ಬ ಪಾಲಕರಿಗೂ ಇದ್ದೇ ಇರುತ್ತದೆ. ಆದರೆ ಕೆಲವರು ಗುಟ್ಟಾಗಿ ಅದನ್ನು ತಿಳಿಯಲು ಪ್ರಯತ್ನಿಸಿದರೆ, ಹಲವರಿಗೆ ಮಗು ಹುಟ್ಟುವವರೆಗೂ ತಾಳ್ಮೆಯಿಂದ ಕಾಯಲೇಬೇಕು.
ಆದರೆ ದುಬೈನ ದಂಪತಿಯೊಬ್ಬರು ತಮ್ಮ ಹುಟ್ಟುವ ಮಗುವು ಗಂಡೋ, ಹೆಣ್ಣೋ ಎಂದು ತಿಳಿಯಲು ವಿಶ್ವದಲ್ಲಿಯೇ ಅಪರೂಪ ಎನ್ನಿಸಬಹುದಾದ ಮಾರ್ಗವನ್ನು ಅನುಸರಿಸಿದ್ದು, ಇದೀಗ ಜಗತ್ತಿನಾದ್ಯಂತ ಜನರನ್ನು ನಿಬ್ಬೆರಗಾಗಿಸಿದೆ.
ಅಷ್ಟಕ್ಕೂ ಇವರು ಮಾಡಿದ್ದೇನೆಂದರೆ, ಮಗುವಿನ ಲಿಂಗವನ್ನು ತಿಳಿಯಲು ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ!
ಇದಾಗಲೇ ಒಂದು ಹೆಣ್ಣುಮಗುವಿನ ಪಾಲಕರಾಗಿರುವ ಅನಸ್ ಮತ್ತು ಅಸಲಾ ಮರ್ವಾ ದಂಪತಿ, ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾರಿ ಶ್ರೀಮಂತರಾಗಿರುವ ಈ ದಂಪತಿಗೆ ತಮ್ಮ ಎರಡನೆಯ ಮಗುವು ಗಂಡೋ, ಹೆಣ್ಣೋ ಎಂದು ತಿಳಿದುಕೊಳ್ಳಲು ಜಗತ್ತಿನಲ್ಲಿಯೇ ಯಾರೂ ಮಾಡದಂಥ ಪ್ರಯತ್ನ ಮಾಡಬೇಕು ಎನ್ನುವ ಹಂಬಲ.
ಅದೇ ಕಾರಣಕ್ಕೆ ಅತಿರಂಜಿತ ಎನ್ನುವ ಸಮಾರಂಭವೊಂದನ್ನು ಇವರು ಆಯೋಗಿಸಿದ್ದರು. 163 ಅಂತಸ್ತುಗಳ 828 ಮೀಟರ್ ಗೋಪುರವಾಗಿರುವ, ವಿಶ್ವದ ಅತ್ಯಂತ ಎತ್ತರದ ಕಟ್ಟಡವೆನಿಸಿರುವ ಬುರ್ಜ್ ಖಲೀಫಾವನ್ನು ಆಯ್ಕೆ ಮಾಡಿಕೊಂಡಿರುವ ಇವರು, ಅಲ್ಲಿ ಬೆಳಕಿನ ಮೂಲಕ ತಮ್ಮ ಹುಟ್ಟುವ ಮಗುವಿನ ಭವಿಷ್ಯವನ್ನು ಕಂಡುಕೊಂಡಿದ್ದಾರೆ.
ನೀಲಿ ಮತ್ತು ಗುಲಾಬಿ ಬಣ್ಣಗಳ ಬೆಳಕಿನಲ್ಲಿ ಒಂದನೆ ಮಹಡಿಯಿಂದ 163ನೇ ಮಹಡಿಯವರೆಗೆ ಬೆಳಕು ಹರಿಯುತ್ತಾ ಹೋಗಿದೆ. ನಂತರ 10ರಿಂದ 1ವರೆಗೆ ಕೌಂಟ್ಡೌನ್ ಶುರುವಾಗಿದೆ. ಅಲ್ಲಿ ನೆರೆದಿದ್ದ ಎಲ್ಲರಲ್ಲಿಯೂ ಮಗುವಿನ ಬಗ್ಗೆ ತಿಳಿದುಕೊಳ್ಳುವ ಆತಂಕ.
ಅಂತಿಮವಾಗಿ ಆ ಬೆಳಕಿನಲ್ಲಿ ಇಟ್ಸ್ ಬಾಯ್ (ಹುಟ್ಟುವ ಮಗು ಗಂಡು) ಎಂದು ತೋರಿಸುತ್ತಿದ್ದಂತೆಯೇ ದಂಪತಿ ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಗಂಡು ಎಂದು ತಿಳಿಯುತ್ತಲೇ ಕೆಲವರು ಆನಂದಬಾಷ್ಪವನ್ನೂ ಹರಿಸಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಇದಾಗಲೇ 2 ದಶಲಕ್ಷಕ್ಕಿಂತ ಅಧಿಕ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಆದರೆ ಹುಟ್ಟುವ ಮಗು ಗಂಡೇ ಎಂದು ಭವಿಷ್ಯ ಹೇಗೆ ನುಡಿದಿದೆ ಎನ್ನುವ ಬಗ್ಗೆ ಎಲ್ಲಿಯೂ ಸ್ಪಷ್ಟನೆ ಇಲ್ಲ.