

ಮುಂಬೈ: ಬಾಲಿವುಡ್ನ ರಿಯಾಲಿಟಿ ಷೋ ಇರಲಿ, ಇನ್ನಾವುದೇ ಹಾಸ್ಯ ಕಾರ್ಯಕ್ರಮವೇ ಇರಲಿ... ಅಲ್ಲಿ ಈ ಕಾಮಿಡಿಯನ್ ಇದ್ದರೆ ಆ ಷೋದ ಮಾತೇ ಬೇರೆ ಎನ್ನುವಷ್ಟು ಪ್ರಸಿದ್ಧಿ ಪಡೆದವರು ಭಾರ್ತಿ ಸಿಂಗ್. ತಮ್ಮ ದಢೂತಿ ದೇಹವನ್ನೇ ತಮ್ಮ ಹಾಸ್ಯದ ವಸ್ತು ಮಾಡಿಕೊಂಡು ಜನರನ್ನು ನಕ್ಕು ನಗಿಸುವಲ್ಲಿ ಪ್ರಸಿದ್ಧರಾಗಿರುವ ಭಾರ್ತಿ ಇದೀಗ ಡ್ರಗ್ಸ್ ಕೇಸ್ನಲ್ಲಿ ಸಿಲುಕಿಕೊಂಡಿದ್ದಾರೆ.
ನಿನ್ನೆ ಭಾರ್ತಿ ಸಿಂಗ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದ ಬೆನ್ನಲ್ಲೇ ಅವರ ಪತಿ ಹರ್ಷ ಲಿಂಬಾಚಿಯಾ ಅವರನ್ನೂ ಇಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಇದೀಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ ತಾವು ಡ್ರಗ್ಸ್ ಸೇವನೆ ಮಾಡುತ್ತಿರುವುದಾಗಿ ಈ ದಂಪತಿ ಒಪ್ಪಿಕೊಂಡಿದ್ದಾರಂತೆ. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ನಿನ್ನೆ ಭಾರ್ತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು.
ಆದ್ದರಿಂದ ದಂಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸತತ 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ. ಸದ್ಯ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆಯೇ ದಂಪತಿ ತಾವು ಡ್ರಗ್ಸ್ ಸೇವನೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಈ ದಂಪತಿ ಸಿಕ್ಕಿಬಿದ್ದದ್ದು ಮಾದಕ ದ್ರವ್ಯಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 21ರಂದು ಮುಂಬೈನ ಖಾರದಂಡಾ ಇಲಾಖೆಯ ಯುವಕನ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ. 21 ವರ್ಷದ ಯುವಕನನ್ನು ವಿಚಾರಣೆಗೆ ಒಳಪಡಿಸಿದಾಗ ಭಾರ್ತಿ ಸಿಂಗ್ ಹೆಸರು ಹೇಳಿದ್ದ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಡ್ರಗ್ಸ್ ಅವರ ಮನೆಯಲ್ಲಿಯೂ ಪತ್ತೆಯಾಗಿದೆ.