ಕಣ್ಣೋಟದಿಂದಲೇ ಅಪರಿಚಿತ ಯುವತಿಯ ಜೀವ ಕಾಪಾಡಿದ ಶ್ವಾನ! ಆತ್ಮಹತ್ಯೆಯಿಂದ ಬಚಾವ್‌ ಆದದ್ದೇ ರೋಚಕ

dog
Published on

ಬ್ರಿಟನ್‌: ಈ ಚಿತ್ರದಲ್ಲಿ ಕಾಣುತ್ತಿರುವ ಮುದ್ದಾದ ನಾಯಿಯ ಹೆಸರು ಡಿಗ್ಬಿ. ಅಗ್ನಿಶಾಮಕ ದಳದ ಸಿಬ್ಬಂದಿ ಇದನ್ನು ಸಲಹುತ್ತಿದ್ದಾರೆ. ಇದಕ್ಕೆ ಕಾರಣ, ಈ ನಾಯಿ ಅವರ ಎಲ್ಲಾ ಒತ್ತಡಗಳನ್ನೂ ನಿವಾರಣೆ ಮಾಡುವುದಂತೆ. ಮಾತ್ರವಲ್ಲದೇ ಹಲವರ ಜೀವನವನ್ನು ತನ್ನ ನೋಟದಿಂದಲೇ ಕಾಪಾಡುವಂಥ ಶಕ್ತಿಯೂ ಇದಕ್ಕಿದೆ.

ಜೀವನದಲ್ಲಿ ಜುಗುಪ್ಸೆಗೊಂಡಿದ್ದ ಯುವತಿಯೊಬ್ಬಳು ಬ್ರಿಟನ್‌ನ ಸೇತುವೆಯೊಂದರ ಮೇಲೆ ನಿಂತು ಪ್ರಾಣಕಳೆದುಕೊಳ್ಳಲು ಯತ್ನಿಸಿದ್ದಾಗ ಈ ನಾಯಿ ತನ್ನ ನೋಟದಿಂದಲೇ ಆಕೆಯನ್ನು ಕಾಪಾಡಿ ಇದೀಗ ಭಾರಿ ಸುದ್ದಿಯಾಗಿದೆ. ಈ ಕುರಿತು ಡೆವಾನ್‌ ಆ್ಯಂಡ್‌ ಸೋಮರ್ಸೆಟ್ ಅಗ್ನಿ ಮತ್ತು ರಕ್ಷಣಾ ಸೇವೆ ಟ್ವೀಟ್ ಮಾಡಿದ್ದು, ’ಈತ ಡಿಗ್ಬಿ. ಇಂದು ಅಸಾಧಾರಣ ಕೆಲಸವೊಂದನ್ನು ಮಾಡಿದ್ದಾನೆ. ಎಕ್ಸ್ಟರ್‌ ಬಳಿಯ ಎಂ5 ಮೇಲಿನ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ ಯುವತಿಯೊಬ್ಬರನ್ನು ರಕ್ಷಿಸಿದ್ದಾನೆ’ ಎಂದು ತಿಳಿಸಿದೆ.

ಮಾತ್ರವಲ್ಲದೇ ಇಂಥ ಎಷ್ಟೋ ಮಂದಿಗೆ ಜೀವರಕ್ಷಕವಾಗಿದೆಯಂತೆ ಈ ಶ್ವಾನ. ಇದರ ನೋಟ ಹಾವ ಭಾವದಿಂದಲೇ ಎಲ್ಲರ ಒತ್ತಡ ನಿವಾರಣೆ ಮಾಡುವ ಅದ್ಭುತ ಶಕ್ತಿ ಇದಕ್ಕೆ ಇರುವ ಕಾರಣದಿಂದಲೇ ಹಲವು ಇಲಾಖೆಗಳ ನೌಕರರ ಒತ್ತಡಕ್ಕಾಗಿ ಇದರ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಯುವತಿಯನ್ನು ಕಾಪಾಡಿದ ಪರಿಯನ್ನು ಅಗ್ನಿ ಮತ್ತು ರಕ್ಷಣಾ ಸೇವೆ ಸಿಬ್ಬಂದಿ ಹೇಳಿದ್ದು ಹೀಗೆ: ಯುವತಿ ಸೇತುವೆ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದಳು. ಕೂಡಲೇ ಡಿಗ್ಬಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗಿದೆ. ಆ ಯುವತಿಗೆ ನಾವು ಏನೂ ಹೇಳಲಿಲ್ಲ. ಒಂದೇ ಒಂದು ಬಾರಿ ಇದರತ್ತ ನೋಡು ಎಂದಿದ್ದೇವೆ. ಆಕೆ ನೋಡುತ್ತಿದ್ದಂತೆಯೇ ಸ್ಮೈಲ್‌ ಕೊಟ್ಟಿದ್ದಾಳೆ. ಒಮ್ಮೆ ಇದರ ಬಳಿ ಬರಲು ಸಾಧ್ಯವೇ ಎಂದು ಕೇಳಿದ್ದೇವೆ. ಕೂಡಲೇ ಆಕೆ ನಾಯಿಯ ಮುಖವನ್ನು ನೋಡುತ್ತಲೇ ಓಡೋಡಿ ಬಂದು ಅದನ್ನೊಮ್ಮೆ ಅಪ್ಪಿಕೊಂಡಿದ್ದಾಳೆ. ಆಗ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ದೂರ ಹೋಗಿ ಮನೆಗೆ ಹೋಗಿದ್ದಾಳೆ ಎಂದು ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net