

ರತನಗಢ (ರಾಜಸ್ಥಾನ): ಇತ್ತೀಚೆಗೆ ಸಲಿಂಗಕಾಮದ ಮದುವೆಗಳು ಭಾರಿ ಸುದ್ದಿ ಮಾಡುತ್ತಿವೆ. ಹುಡುಗಿ, ಹುಡುಗಿಯನ್ನೇ ಮದುವೆಯಾಗುವುದು, ಹುಡುಗ ಹುಡುಗನನ್ನು ಮದುವೆಯಾಗುವ ವಿಷಯಗಳು ಇದೀಗ ಗುಟ್ಟಾಗಿ ಉಳಿದಿಲ್ಲ. ಪುರುಷನಿಗೆ ಸ್ತ್ರೀಯ ಮೇಲೆ, ಸ್ತ್ರೀಗೆ ಪುರುಷನ ಮೇಲೆ ಆಸೆ, ಕಾಮನೆ ಹುಟ್ಟುವುದು ಪ್ರಕೃತಿ ಸಹಜವಾದದ್ದು. ಆದರೆ ತಮ್ಮ ದೇಹ ಪ್ರಕೃತಿ ಇದಕ್ಕೆ ವಿರುದ್ಧವಾಗಿದ್ದು, ಇದರಲ್ಲಿ ತಮ್ಮ ತಪ್ಪೇನೂ ಇಲ್ಲ, ಒಂದೇ ಲಿಂಗಿಗಳ ಆಕರ್ಷಿತರಾಗುವುದು ತಮ್ಮ ದೇಹಪ್ರಕೃತಿಯಾಗಿರುವ ಕಾರಣ, ಅದನ್ನು ತಪ್ಪು ಎನ್ನುವುದೇ ತಪ್ಪು ಎಂಬ ವಾದ ಮಾಡುತ್ತಿದ್ದಾರೆ ಸಲಿಂಗಿಗಳು.
ಈಗ ಅಂಥದ್ದೇ ಒಂದು ಘಟನೆ ರಾಜಸ್ಥಾನದ ಚುರು ಜಿಲ್ಲೆಯ ರತನ್ಗಢದಲ್ಲಿ ನಡೆದಿದೆ. ಅಣ್ಣನ ಪತ್ನಿಯ ತಂಗಿಯ ಮೇಲೆ ವ್ಯಾಮೋಹಗೊಂಡ ಯುವತಿಯೊಬ್ಬಳು ಆಕೆಯನ್ನೇ ಮದುವೆಯಾಗಿರುವ ಘಟನೆ ಇದಾಗಿದೆ. ಇಬ್ಬರೂ ಮೊದಲ ನೋಟದಲ್ಲಿಯೇ ಪ್ರೀತಿಸಲು ಶುರು ಮಾಡಿದ್ದು, ತಮ್ಮ ಪಾಲಕರ ವಿರೋಧದ ನಡುವೆ ಓಡಿಹೋಗಿ ಮದುವೆಯಾಗಿದ್ದಾರೆ.
ರಾಜಸ್ಥಾನದ ಚುರು ಜಿಲ್ಲೆಯ ರತನ್ಗಢದಲ್ಲಿ ವಾಸಿಸುತ್ತಿರುವ ಯುವತಿ ಹರಿಯಾಣದ ಜಿಂದ್ನಲ್ಲಿರುವ ಅತ್ತಿಗೆ ಮನೆಗೆ ಹೋಗಿದ್ದಳು. ಆಗ ಅತ್ತಿಗೆಯ ತಂಗಿಯ ಪರಿಚಯವಾಗಿದೆ. ಆದರೆ ಪರಸ್ಪರ ಆಕರ್ಷಣೆಯಾದಾಗ ಇಬ್ಬರಿಗೂ ತಾವು ಸಲಿಂಗಿಗಳು ಎನ್ನುವುದು ತಿಳಿದಿದೆ. ಇಬ್ಬರ ವ್ಯವಹಾರ ನೋಡಿದ ಕುಟುಂಬಸ್ಥರಿಗೆ ಅನುಮಾನ ಬಂದು ಇಬ್ಬರನ್ನೂ ಬೇರೆ ಬೇರೆ ಮಾಡಿದ್ದರು. ಅವರ ಮೇಲೆ ಕಣ್ಣು ಕೂಡ ಇಟ್ಟಿದ್ದರು.
ಆದರೆ ಈ ಜೋಡಿ ಮಾತ್ರ ಯಾವುದಕ್ಕೂ ಕೇರೇ ಮಾಡಲಿಲ್ಲ. ಪಾಲಕರನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆಯಾಗಿದ್ದಾರೆ. ಇಬ್ಬರೂ ಫತೇಹಾಬಾದ್ಗೆ ಹೋಗಿ ಮದುವೆಯಾಗಿದ್ದು, ನಂತರ ಎರಡು ತಿಂಗಳು ಒಟ್ಟಿಗೇ ವಾಸವಾಗಿದ್ದರು.
ಇವರಿಬ್ಬರ ಪಾಲಕರು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ನಂತರ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿದ್ದಾರೆ. ಆದರೆ ಯುವತಿಯರು ತಮ್ಮ ವಿಷಯವನ್ನು ತಿಳಿಸಿ, ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎಂಬ ವಿಷಯ ತಿಳಿಸಿದಾಗ ಪೊಲೀಸರು ಮಧ್ಯೆ ಪ್ರವೇಶಿಸದೇ ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ.