‘ನಿಮ್ಮ ಮರಣ ಪ್ರಮಾಣ ಪತ್ರ ಬಂದಿದೆ, ಕಲೆಕ್ಟ್‌ ಮಾಡಿ’ ಎಂದು ಶಿಕ್ಷಕನಿಗೆ ಕಾರ್ಪೋರೇಷನ್‌ ಸಿಬ್ಬಂದಿ ಕರೆ!

kovid
Published on

ಮುಂಬೈ: ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಅದಲು ಬದಲು ಮಾಡಿ ಯಾರದ್ದೋ ಶವವನ್ನು ಇನ್ನಾರೋ ಅಂತ್ಯಸಂಸ್ಕಾರ ಮಾಡಿರುವ ಘಟನೆಗಳಿಗಂತೂ ಲೆಕ್ಕವೇ ಇಲ್ಲ. ಮೃತಪಟ್ಟಿರುವುದಾಗಿ ಹೇಳಿದ ವ್ಯಕ್ತಿ ಬದುಕಿರುವ ಘಟನೆಗಳೂ ವರದಿಯಾಗಿವೆ. ಆದರೆ ಇವುಗಳಿಗಿಂತ ಸ್ವಲ್ಪ ಭಿನ್ನ ಎನಿಸುವ ಘಟನೆಯೊಂದ ಮುಂಬೈನ ಥಾಣೆಯಲ್ಲಿ ನಡೆದಿದೆ.

ಅದೇನೆಂದರೆ ಬದುಕಿರುವ ಶಿಕ್ಷಕನೊಬ್ಬನಿಗೆ ಕಾರ್ಪೋರೇಷನ್‌ ಸಿಬ್ಬಂದಿ ಕರೆ ಮಾಡಿ ಅವರದ್ದೇ ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡು ಹೋಗುವಂತೆ ಹೇಳಿದ್ದಾರೆ! ಇಂಥ ಒಂದು ಕರೆಯನ್ನು ಸ್ವೀಕರಿಸಿದವರು ಶಿಕ್ಷಕ ಚಂದ್ರಶೇಖರ್ ದೇಸಾಯಿ ಘಟ್ಕೋಪರ್.

‘ನನಗೆ ಮುನಿಸಿಪಲ್ ಮಹಿಳಾ ಸಿಬ್ಬಂದಿಯಿಂದ ಕರೆ ಬಂತು. ನಾನು ಥಾಣೆ ಪುರಸಭೆಯ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನೀವು ಯಾರು ಎಂದು ಕೇಳಿದರು. ನಾನು ಚಂದ್ರಶೇಖರ್ ದೇಸಾಯಿ ಎಂದು ಹೇಳಿದೆ. ಆಗ ಅವರು, ಚಂದ್ರಶೇಖರ್ ದೇಸಾಯಿ ಅವರ ಮರಣ ಪತ್ರ ನೀಡಲು ಕರೆ ಮಾಡಿದ್ದೇನೆ, ಪ್ರಮಾಣ ಪತ್ರ ಸಿದ್ಧವಾಗಿದೆ. ಕಚೇರಿಗೆ ಬಂದು ತೆಗೆದುಕೊಂಡು ಹೋಗಿ’ ಎಂದು ಹೇಳಿದಾಗ ನಾನು ಶಾಕ್‌ ಆದೆ ಎಂದು ದೇಸಾಯಿ ಹೇಳಿದರು.

ನಂತರ ನಾನು ಯಾರ್ರೀ ಸತ್ತಿದ್ದು, ನಾನೇ ಚಂದ್ರಶೇಖರ್ ಎಂದೆ. ನಂತರ ಆ ಮಹಿಳೆ ಅಚ್ಚರಿಯಿಂದ ಕೂಡಲೇ ಸಾರಿ, ನಿಮ್ಮ ಕುಟುಂಬದಲ್ಲಿ ಯಾರಾದರೂ ಕೋವಿಡ್‍ನಿಂದ ಮೃತಪಟ್ಟಿದ್ದಾರೆಯೇ ಎಂದು ಕೇಳಿದರು. ನನಗೆ ಕೋವಿಡ್‌ ಬಂದಿದ್ದು ನಿಜ. ನಂತರ ಗುಣಮುಖರಾಗಿ ಬಂದಿದ್ದೇನೆ. ಆದರೆ ದೂರು ಸಲ್ಲಿಸಿದಾಗ ತಿಳಿಯಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ದಾಖಲೆ ಪ್ರಕಾರ ನಾನು 2021 ರ ಏಪ್ರಿಲ್ 22 ರಂದು ಸತ್ತುಹೋಗಿದ್ದೇನೆ’ ಎಂದು ದೇಸಾಯಿ ವಿವರಿಸಿದರು.

ನಾನು ಸಿಟ್ಟಿನಿಂದ ಆಗಿರುವ ಅಚಾತುರ್ಯದ ಕುರಿತು ಹೇಳಿದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾವ ಅಧಿಕಾರಿಯೂ ತಯಾರಿಲ್ಲ. ಘಟನೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾರ್ಪೋರೇಷನ್ ಅವರು ಕಳುಹಿಸದೆ ಐಸಿಎಂಆರ್ ಪಟ್ಟಿಯಲ್ಲಿ ನನ್ನ ಹೆಸರು ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net