

ನೆಲಮಂಗಲ: ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ನೆಲಮಂಗಲ ಬಾರ್ ವೊಂದಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಕುಡುಕರು ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪರಸ್ಪರ ಅಂತರ ಕಾಯ್ದುಕೊಳ್ಳದೆ ಕರೊನಾ ನಿಯಮ ಉಲ್ಲಂಘಿಸಿ ಎಣ್ಣೆ ಹೀರುವುದರಲ್ಲಿ ತಲ್ಲೀನರಾಗಿದ್ದ ಕುಡುಕರು ಡಿಸಿ ಹಾಗೂ ಅಧಿಕಾರಿಗಳ ತಂಡ ಎಂಟ್ರಿ ಆಗುತ್ತಿದ್ದಂತೆ ತಡಬಡಾಯಿಸಿ ಹೊರ ಓಡಿದ್ದಾರೆ.
ಯಾರು ಬಂದಿದ್ದಾರೆ, ಯಾಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದ ಗ್ರಾಹಕರು ಕುಡಿದ ಬಿಲ್ ಸಹ ನೀಡದೆ ಜಾಗ ಖಾಲಿ ಮಾಡಿದ್ದಾರೆ.
ತುಂಬಿ ತುಳುಕುತ್ತಿದ್ದ ಬಾರ್ ಕ್ಷಣಾರ್ಧದಲ್ಲಿ ಖಾಲಿಯಾಗಿದೆ. ಬಾರ್ ಮಾಲೀಕರನ್ನು ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ ಕರೊನಾ ನಿಯಮ ಉಲ್ಲಂಘನೆಯಡಿ ನೋಟಿಸ್ ಜಾರಿಮಾಡಿದ್ದಾರೆ. ಕುಡುಕರ ದೌಡು ಕಂಡ ಸಾರ್ವಜನಿಕರಿಗೆ ಬಿಟ್ಟಿ ಮನರಂಜನೆ ಸಿಕ್ಕಿದಂತಾಗಿದೆ.