ದಿನಕ್ಕೊಂದು ಮೊಟ್ಟೆ- ಶುರುವಾಗುವುದು ಶುಗರ್​: ಅಧ್ಯಯನದಲ್ಲಿ ಆತಂಕದ ವಿಷಯ ಬಹಿರಂಗ!

egg2
Published on

ಲಂಡನ್: ದಿನಕ್ಕೊಂದು ಮೊಟ್ಟೆ- ತುಂಬುವುದು ಹೊಟ್ಟೆ ಎಂಬ ನಾಣ್ಣುಡಿಯನ್ನು ಹಲವಾರು ದಶಕಗಳಿಂದ ಕೇಳುತ್ತಲೇ ಬಂದಿದ್ದೇವೆ. ಆದರೆ ಇದೀಗ ಇದರ ವ್ಯಾಖ್ಯಾನ ಬದಲಾಗಿದೆ. ಈಗ ದಿನವೂ ಮೊಟ್ಟೆ ತಿಂದರೆ ಮಧುಮೇಹ ರೋಗ ಬರುವುದು ಖಂಡಿತ ಎಂದೇ ಹೇಳಲಾಗುತ್ತಿದೆ.

ಇದಕ್ಕೆ ಕಾರಣ, ಹಿಂದಿನಂತೆ ಈಗ ಅಸಲಿ ಮೊಟ್ಟೆಯ ಬದಲು ಕಲಬೆರಕೆಯ, ವಿಷಪೂರಿತ, ರಾಸಾಯನಿಕ ಅಂಶಗಳು ಇರುವ ಮೊಟ್ಟೆಗಳೇ ಸಿಗುತ್ತಿರುವುದು!

ಇಂಥದ್ದೊಂದು ಆತಂಕದ ವರದಿಯನ್ನು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರೀಷನ್ ವರದಿ ಪ್ರಕಟಿಸಿದೆ. ಚೀನಾದ ವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಕತಾರ್ ನ ಲಾಂಗಿಟ್ಯೂಡಿನಲ್ ಅಧ್ಯಯನದಿಂದ ತಿಳಿದುಬಂದಿದೆ.

ಮೊಟ್ಟೆಯಿಂದ ತಯಾರಿಸಲಾಗುವ ಉಪಹಾರಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ. ಆದರೆ ದಿನವೊಂದಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಮಧುಮೇಹಕ್ಕೂ ಆಹ್ವಾನ ನೀಡಿದಂತಾಗಲಿದೆ. ದಿನವೊಂದಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸುವವರಿಗೆ ಮಧುಮೇಹ ಎದುರಾಗುವ ಸಾಧ್ಯತೆ ಶೇ.60 ರಷ್ಟು ಹೆಚ್ಚಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಸಂಶೋಧಕರು. ಸಮೀಕ್ಷೆಯಲ್ಲಿ 8,545 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

1991-2009ರ ವರೆಗೆ ನಡೆದಿರುವ ಸುದೀರ್ಘ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ. ಈ ವರದಿಯ ಅನ್ವಯ ಪುರುಷರಿಗಿಂತ ಅಧಿಕವಾಗಿ ಮಹಿಳೆಯರಲ್ಲಿ ಮಧುಮೇಹದ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲಿ ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ 1991 ರಿಂದ 2009 ವರೆಗೆ ಮೊಟ್ಟೆ ಸೇವನೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈ ಅವಧಿಯಲ್ಲಿ ಮೊಟ್ಟೆ ಸೇವನೆ ಮಾಡುವವರ ಸಂಖ್ಯೆ ದ್ವಿಗುಣಗೊಂಡಿದೆ. ಈ ಸಂದರ್ಭದಲ್ಲಿ ಸಕ್ಕರೆ ಕಾಯಿಲೆಯವರ ಪ್ರಮಾಣದಲ್ಲಿಯೂ ಏರಿಕೆ ಆಗಿದೆ. ಡಯೆಟ್ ಎನ್ನುವುದು ಟೈಪ್2 ಮಧುಮೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾರಣವಾಗಲಿದೆ, ಡಯೆಟ್​ನ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಪ್ರಸ್ತುತ ಮಧುಮೇಹದ ಬೆಳವಣಿಗೆಯ ಬಗ್ಗೆ ಅರಿವುದು ಅತ್ಯಂತ ಮುಖ್ಯ ಎಂದು ಮಿಂಗ್ ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net