

ಬೆಂಗಳೂರು: ಕರೊನಾ ಎರಡನೇ ಅಲೆ ಹೊಡೆತಕ್ಕೆ ಸಿಕ್ಕಿರುವ ಬೆಂಗಳೂರಿನಲ್ಲಿ ಸೋಂಕು ನಿಯಂತ್ರಿಸುವ ಮೂಲಕ ಕರೊನಾವನ್ನು ಕಟ್ಟಿಹಾಕಲು ಎರಡು ವಾರಗಳ ಕಾಲ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕು ಕೈಮೀರಿದ್ದು, ಅದರಲ್ಲೂ ಬೆಂಗಳೂರು ನಗರ ಒಂದರಲ್ಲೇ ದಿನದ ಸೋಂಕು ಪ್ರಕರಣಗಳೂ 15 ಸಾವಿರ ದಾಟಿದೆ. ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿದ್ದು, ಹಾಗಾದಲ್ಲಿ ಈಗಿರುವ ಹಾಸಿಗೆಗಳ ಕೊರತೆ ಮತ್ತಷ್ಟು ಮಿತಿಮೀರಲಿದೆ. ಜತೆಗೆ ಆಕ್ಸಿಜನ್ ಹಾಗೂ ಔಷಧಗಳ ಕೊರತೆಯೂ ಎದುರಾಗಿದೆ. ಹಾಗಾಗಿ ಕೋವಿಡ್ ಜೈನ್ ಲಿಂಕ್ ಕಟ್ ಮಾಡಲು ಕಟ್ಟುನಿಟ್ಟಿನ ಲಾಕ್ ಡೌನ್ ಅಗತ್ಯವಿದೆ. ಇಲ್ಲವಾದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಸಾಧ್ಯವಿಲ್ಲ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಒಂದರಲ್ಲೇ ಸದ್ಯ 1.6 ಲಕ್ಷ ಸಕ್ರಿಯ ಸೋಂಕು ಪ್ರಕರಣಗಳಿದ್ದು, ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಸೋಂಕಿತರು ಹಾಸಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಯಗೆ ಅಲೆದಾಡುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಪಡೆಯಲಾಗದೆ ಉಸಿರು ಚೆಲ್ಲುತ್ತಿದ್ದಾರೆ. ಹಾಗಾಗಿ ಕನಿಷ್ಠ 14 ದಿನಗಳ ಕಾಲ ಬೆಂಗಳೂರನ್ನು ಸಂಪೂರ್ಣ ಲಾಕ್ ಡೌನ್ ಮಾಡಿದರೆ ಸೋಂಕು ನಿಯಂತ್ರಿಸಬಹುದು ಎಂದು ತಜ್ಱರು ಶಿಫಾರಸು ಮಾಡಿದ್ದಾರೆ.
ವೀಕ್ ಡೇಸ್ ಕರ್ಫ್ಯೂ ಅನಿನಿವಾರ್ಯ: ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಮುಂದಾಗುವ ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಸದ್ಯಕ್ಕೆ ನಮ್ಮೆದುರಿಗೆ ಇರುವುದು ಒಂದೇ ಮಾರ್ಗ ಅದು ಲಾಕ್ ಡೌನ್. ಸದ್ಯ ವಾರಾಂತ್ಯ ಇರುವ ಕಫ್ರ್ಯೂ ಅನ್ನು 14 ದಿನಗಳ ಕಾಲ ವಾರದ ಇತರೆ ದಿನಗಳಿಗೂ ವಿಸ್ತರಿಸುವ ಅನಿವಾರ್ಯ ಇದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ ಬಾಬು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಸಂಖ್ಯೆಯನ್ನು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಸ್ವಯಂ ಪ್ರೇರಿತವಾಗಿ ಹಾಸಿಗೆಗಳನ್ನು ನೀಡಿದರೆ ಅವುಗಳ ನಿರ್ವಹಣೆಯನ್ನು ಸರ್ಕಾರವೇ ಮಾಡಬೇಕು. ಜತೆಗೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಮನ ಒಲಿಸುವ ಮೂಲಕ ಹೆಚ್ಚಿನ ಹಾಸಿಗೆಗಳನ್ನು ಪಡೆದು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಆಗ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಾವು ನೋವು ನಿಯಂತ್ರಿಸಬಹುದು ಎಂದು ಸಲಹೆ ನೀಡಿದ್ದಾರೆ.
ಜನರಿಗೆ ಬುದ್ದಿ ಬಂದಿಲ್ಲ: ರಾಜ್ಯದಲ್ಲಿ ಸೋಂಕು ಮಿತಿ ಮೀರಿ ಏರುತ್ತಿದೆ. ಇಷ್ಟಾದರೂ ಜನರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಸೋಂಕಿತರು ಪರಿಸ್ಥಿತಿ ನೋಡಿಯೂ ಜನರು ನಿಯಮ ಪಾಲಿಸುತ್ತಿಲ್ಲ ನಾನಾ ನೆಪಗಳನ್ನು ಒಡ್ಡಿಕೊಂಡು ಗುಂಪು ಸೇರುವುದು, ಮಾಸ್ಕ ಇಲ್ಲದೆ ತಿರುಗಾಡುತ್ತಿರುವುದು ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿರುವ ತಜ್ಱರು, ಇನ್ನಾದರೂ ಜನರ ಎಚ್ಚೆತ್ತುಕೊಂಡು ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮ ಪಾಲಿಸಬೇಕು ಎಂದು ಸೂಚಿಸಿದ್ದಾರೆ.