

ಹೈದರಾಬಾದ್: ತನ್ನ ಪ್ರಿಯಕರ ಇನ್ನೊಬ್ಬಳ ಜತೆ ಸಲುಗೆಯಿಂದ ಇರುವುದನ್ನು ಸಹಿಸದ ಯುವತಿಯೊಬ್ಬಳು ಸುಪಾರಿ ಕೊಟ್ಟು ಆಕೆಯ ಮೇಲೆ ಗ್ಯಾಂಗ್ರೇಪ್ ಮಾಡಿಸಿರುವ ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ ಕೊಂಡಾಪುರದ ನಿವಾಸಿ ಗಾಯತ್ರಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ. ಐವರು ಪುರುಷರಿಗೆ ಹಣ ಕೊಟ್ಟ ಪ್ರಿಯಕರನ ಇನ್ನೋರ್ವ ಗೆಳತಿಯನ್ನು ಗ್ಯಾಂಗ್ರೇಪ್ ಮಾಡಿಸಿದ್ದಾಳೆ. ಮೇ 26 ರಂದು ಈ ಘಟನೆ ನಡೆದಿದ್ದು ಇದೀಗ ಬೆಳಕಿದೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಾಯತ್ರಿ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?
ಆರೋಪಿ ಗಾಯತ್ರಿ ತನ್ನ ಗೆಳೆಯನ ಜತೆ ಲಿವ್ ಇನ್ ಸಂಬಂಧದಲ್ಲಿ ಇದ್ದಳು. ಆಕೆಯ ಪ್ರಿಯಕರ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದು, ಈ ಸಂಬಂಧ ಕೋಚಿಂಗ್ ಸೆಂಟರ್ಗೆ ಹೋಗುತ್ತಿದ್ದ. ಅಲ್ಲಿಯೇ ಯುವತಿಯೊಬ್ಬಳು ಕೋಚಿಂಗ್ಗೆ ಬರುತ್ತಿದ್ದಳು. ಇವರಿಬ್ಬರ ಮೇಲೆ ಗಾಯತ್ರಿಗೆ ಅನುಮಾನ ಶುರುವಾಗಿದೆ. ತನ್ನ ಪ್ರಿಯಕರ ಆಕೆಯ ಜತೆ ಸಂಬಂಧ ಹೊಂದಿದ್ದಾನೆ ಎಂದು ಅನ್ನಿಸಿದೆ. ಅವರಿಬ್ಬರೂ ಅಭ್ಯಾಸಕ್ಕೆಂದು ಒಟ್ಟಿಗೇ ಸಿಗುತ್ತಿದ್ದುದರಿಂದ ಈಕೆಗೆ ಅವರ ಮೇಲೆ ಅನುಮಾನ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ಕೊಡಲು ಎಂಬಂತೆ ಅವರಿಬ್ಬರ ನಡುವೆ ವಾಟ್ಸ್ಆ್ಯಪ್ನಲ್ಲಿ ನಡೆಯುತ್ತಿರುವ ಸಂಭಾಷಣೆಗಳಿಂದ ಈಕೆಗೆ ಮತ್ತಷ್ಟು ಸಂಶಯ ಶುರುವಾಗಿದೆ.
ಇದೇ ಕಾರಣಕ್ಕೆ ಐವರಿಗೆ ಹಣವನ್ನು ಕೊಟ್ಟು ಆ ಯುವತಿಯನ್ನು ಅತ್ಯಾಚಾರ ಮಾಡುವಂತೆ ಹೇಳಿದ್ದಾಳೆ. ಆ ಯುವತಿಯನ್ನು ಮನೆಗೆ ಕರೆಸಿಕೊಂಡ ಗಾಯತ್ರಿ ಆಕೆಯ ಜತೆ ಮಾತನಾಡುವಂತೆ ಮಾಡಿದ್ದಾಳೆ. ಕೊನೆಗೆ ಮನೆ ಬಾಗಿಲನ್ನು ಹಾಕಿದ್ದಾಳೆ. ಅಲ್ಲಿ ಸುಪಾರಿ ಪಡೆದುಕೊಂಡಿದ್ದ ವಿಷ್ಣುವರ್ಧನ್, ಮನೋಜ್, ಮಸ್ತಾನ್, ಮುಜಾಹಿದ್ ಮತ್ತು ಮೌಲಾ ಅಲಿ ಆಕೆಗಾಗಿ ಕಾಯುತ್ತಿದ್ದರು. ಎಲ್ಲರೂ ಸೇರಿ ಗ್ಯಾಂಗ್ರೇಪ್ ಮಾಡಿದ್ದಾರೆ.
ಆಕೆಯ ದೂರಿನ ಅನ್ವಯ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಚ್ಚಿಬೌಲಿ ಪೊಲೀಸ್ ನಿರೀಕ್ಷಕ ಜಿ.ಸುರೇಶ್ ಈ ಮಾಹಿತಿ ನೀಡಿದ್ದಾರೆ.