

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧಿಯಾಗಿರುವ ಕಾಳಿ ಪೂಜೆಯ ವೇಳೆ ಪಟಾಕಿ ಸುಡಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹೋದರೂ ಕೋರ್ಟ್ ಅದನ್ನು ಮಾನ್ಯ ಮಾಡಿಲ್ಲ. ಇದರ ಬೆನ್ನಲ್ಲೇ ಇದೀಗ ಪಟಾಕಿ ನಿಷೇಧ ಕಾನೂನನ್ನು ಉಲ್ಲಂಘಿಸಿ ಪಟಾಕಿ ಹಚ್ಚುವವರನ್ನು ಪತ್ತೆಹಚ್ಚಲು ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ, ಜಿಪಿಎಸ್ ಆಧಾರಿತ ಸೌಂಡ್ ಮಾನಿಟರಿಂಗ್ ಸಾಧನವನ್ನು ಪೊಲೀಸರಿಗೆ ಸರ್ಕಾರ ನೀಡಿದೆ. ಇದಾಗಲೇ ಸಾವಿರಕ್ಕೂ ಅಧಿಕ ಸೌಂಡ್ ಮಾನಿಟರಿಂಗ್ ಸಾಧನಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವಿತರಿಸಲಾಗಿದೆ.
ಕಾಳಿ ಪೂಜೆ ಮತ್ತು ಇತರ ಹಬ್ಬಗಳ ಆಚರಣೆ ವೇಳೆ ಪಟಾಕಿ ಮಾರಾಟ ಮತ್ತು ಪಟಾಕಿ ಸುಡುವುದನ್ನು ಸರ್ಕಾರ ನಿಷೇಧಿಸಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಪಟಾಕಿ ಹಚ್ಚಲು ಅನುಮತಿ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ ಅದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.
ಉತ್ಸವಗಳನ್ನು ನಡೆಸುವುದು ಎಲ್ಲರಿಗೂ ಮುಖ್ಯ. ಆದರೆ ಅದಕ್ಕಿಂತ ಮುಖ್ಯವಾದದ್ದು ಮನುಷ್ಯನ ಜೀವ. ಮನುಷ್ಯನ ಪ್ರಾಣ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೋಲ್ಕೊತಾ ಕೋರ್ಟ್ ತೀರ್ಪು ನೀಡಿದೆ. ಕರೊನಾ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಮನುಷ್ಯರ ಮೇಲೆ ಆಗುವ ಅನಾಹುತ ತಡೆಗಟ್ಟುವುದೇ ಮುಖ್ಯ. ಆದ್ದರಿಂದ ಹೈಕೋರ್ಟ್ ತೀರ್ಪಿಗೆ ತಡೆ ನೀಡಲಾಗದು ಎಂದಿದೆ.
ಆದ್ದರಿಂದ ಇದೀಗ ಈ ಸಾಧನ ನೀಡಲಾಗಿದೆ. ಪಟಾಕಿ ಸುಡುತ್ತಿರುವ ಜಾಗ, ದಿನಾಂಕ ಮತ್ತು ಸಮಯವನ್ನು ಈ ಸಾಧನ ಪತ್ತೆ ಹಚ್ಚುವುದಲ್ಲದೆ ಪಟಾಕಿ ಸದ್ದಿನ ಪ್ರಮಾಣವನ್ನೂ ಅಳೆಯುತ್ತದೆ. ಈ ಸಾಧನಕ್ಕೆ ಪ್ರಿಂಟರ್ ಕನೆಕ್ಟ್ ಮಾಡಿದರೆ ಮುದ್ರಿತ ಪ್ರತಿಯನ್ನೂ ತೆಗೆದುಕೊಳ್ಳಬಹುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಕಲ್ಯಾಣ ರುದ್ರ ಹೇಳಿದ್ದಾರೆ.
ಈ ಸಾಧನವನ್ನು ಬಳಸುವ ರೀತಿ ಹೇಗೆ ಎಂಬುದನ್ನು ನಾವು ಪೊಲೀಸರಿಗೆ ಹೇಳಿ ಕೊಟ್ಟಿದ್ದೇವೆ ಎಂದಿದ್ದಾರೆ.