ಮೋಜು- ಸಭೆ ಸಮಾರಂಭಗಳ ಮೇಲೆ ಪುನಃ ಕರೊನಾ ಕರಿನೆರಳು: ಸಚಿವರು ನೀಡಿರೋ ಎಚ್ಚರಿಕೆ ಇಲ್ಲಿದೆ ನೋಡಿ...

corona
Published on

ಬೆಂಗಳೂರು: ಮೋಜು-ಮಸ್ತಿ ಪಾರ್ಟಿ, ಸಭೆ-ಸಮಾರಂಭ ಅಂತ ಕರೊನಾ ಸೋಂಕು ರಿಯಾಯಿತಿ ನೀಡಲ್ಲ. ನಿರ್ಲಕ್ಷಿಸಿದರೆ ಆಪತ್ತು ಕಟ್ಟಿಟ್ಟಬುತ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಜನರ ಜವಾಬ್ದಾರಿಯಾಗಿದೆ. ಸರ್ಕಾರದಿಂದಲೇ ಎಲ್ಲವನ್ನು ನಿಯಂತ್ರಿಸಲಾಗದು. ಸೋಂಕು ಪ್ರಕರಣಗಳು ಹೆಚ್ಚಾದರೆ ಜನರೇ ಜವಾಬ್ದಾರರು ಎಂದು ಖಡಕ್ ಆಗಿ ಹೇಳಿದರು.

ಸಿಎಂ ಜತೆ ಚರ್ಚೆ

ಕರೊನಾ 2ನೇ ಅಲೆ ಅಪ್ಪಳಿಸಿರುವ ಕಾರಣ ಮುಂದಿನ 45-90 ದಿನಗಳನ್ನು ಅತ್ಯಂತ ಸೂಕ್ಷ್ಮ, ಸೂಕ್ತ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ತಾಂತ್ರಿಕ ತಜ್ಞರ ಸಲಹಾ ಸಮಿತಿ ನೀಡಿದ ಸಲಹೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದರು.

ಶಾಲೆ-ಕಾಲೇಜುಗಳ ಬಗ್ಗೆ ಮರು ಪರಿಶೀಲನೆ, ಈಜುಕೊಳ, ಪಾರ್ಕ್, ಜಿಮ್ ಬಂದ್ ಮಾಡುವುದು, ಮದುವೆ ಇನ್ನಿತರ ಸಮಾರಂಭಗಳಿಗೆ 100 ಜನರು ಹಾಗೂ ಹೊರಾಂಗಣ ಸಭೆ- ಸಮಾರಂಭಗಳಿಗೆ 200 ಜನರ ಮಿತಿ ಸೇರಿದಂತೆ ಮುಂದಿನ 14 ದಿನಗಳ ಕಾಲ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net