

ಜಿನಾನ್ (ಚೀನಾ): ಕರೊನಾ ವೈರಸ್ ತವರು ಚೀನಾದಲ್ಲೀಗ ದನದ ಮಾಂಸದ (ಬೀಫ್) ಆಮದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕೆ ಕಾರಣ, ಇಲ್ಲಿಯವರೆಗೆ ತರಿಸಿಕೊಂಡಿದ್ದ ಮಾಂಸದಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ. ಇದೇ ಭೀತಿಯಿಂದ ಅದನ್ನು ನಿಲ್ಲಿಸಲಾಗಿದೆ ಎಂದು ಚೀನಾ ಹೇಳಿದೆ.
ಬ್ರೆಜಿಲ್, ನ್ಯೂಜಿಲೆಂಡ್, ಬೊಲಿವಿಯಾದಿಂದ ದನದ ಮಾಂಸಗಳನ್ನು ಚೀನಾ ಸಾಮಾನ್ಯವಾಗಿ ಆಮದು ಮಾಡಿಕೊಳ್ಳುತ್ತದೆ. ಈ ಮಾಂಸ ಸೇರಿದಂತೆ ಅದರ ಉತ್ಪನ್ನಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಮಾಂಸದಲ್ಲಿ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳಿಂದಲೂ ಆಮದನ್ನು ಕೂಡಲೇ ಬಂದ್ ಮಾಡಲಾಗಿದೆ ಎಂದು ಜಿನಾನ್ ಮುನ್ಸಿಪಲ್ ಹೆಲ್ತ್ ಕಮಿಷನ್ ತನ್ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಶಾಂಘೈನ ಯಾಂಗ್ಶಾನ್ ಪ್ರಾಂತ್ಯದ ಜಿನಾನ್ ನಗರದಿಂದ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಕರೊನಾ ವೈರಸ್ ಪತ್ತೆಯಾಗಿತ್ತು. ನಂತರ ಎಲ್ಲಾ ದೇಶಗಳಿಂದ ಆಮದಾಗಿರುವ ಮಾಂಸಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಹಲವು ಮಾಂಸದಲ್ಲಿ ಅದರಲ್ಲಿಯೂ ಫ್ರೀಜ್ ಮಾಡಿರುವ ಮಾಂಸಗಳಲ್ಲಿ ಸೋಂಕು ಪತ್ತೆಯಾಗಿದೆ.
ಉತ್ಪನ್ನಗಳನ್ನು ರವಾನಿಸಿದ ಕಂಪೆನಿಗಳ ಹೆಸರನ್ನು ಬಹಿರಂಗಪಡಿಸದ ಚೀನಾ, ಸದ್ಯ ದನದ ಮಾಂಸಗಳನ್ನು ಆಮದು ಬ್ಯಾನ್ ಮಾಡಿರುವುದಾಗಿ ಹೇಳಿದೆ.
ಬಂದರು ಮೂಲಕ ಇಲ್ಲಿ ಮಾಂಸದ ಸಾಗಣೆ ಬರುತ್ತದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ಖರೀದಿ ಮಾಡಲಾಗುತ್ತದೆ. ಕಿಂಗ್ದಾವೋ ಕೋಲ್ಡ್ ಸ್ಟೋರೇಜ್ ಘಟಕದಿಂದ ಬಂದರು ಮೂಲಕ ಬಂದಿರುವ ಮಾಂಸವನ್ನು ಗೋದಾಮಿಗೆ ಕಳುಹಿಸುವ ಮುನ್ನ ಸ್ಕ್ರೀನಿಂಗ್ ಮಾಡಲಾಗಿತ್ತು.
ಆರೋಗ್ಯಾಧಿಕಾರಿಗಳು ಕ್ರಮಕೈಗೊಂಡಿದ್ದು, ಮಾಂಸ ಆಮದು ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.