

ನವದೆಹಲಿ: ದೆಹಲಿಯಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತ್ತಲೇ ಸಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲಾ ಅವರು, ಅನ್ಲಾಕ್ ನಿಯಮಗಳನ್ನೆಲ್ಲಾ ವಾಪಸ್ ಪಡೆದಿದ್ದು, ಮತ್ತೆ ಲಾಕ್ಡೌನ್ಗೆ ಮುಂದಾಗಿದ್ದಾರೆ.
1.9 ಕೋಟಿ ಜನಸಂಖ್ಯೆ ಇರುವ ದೆಹಲಿಯಲ್ಲಿ 4.89 ಲಕ್ಷ ಕರೊನಾ ಕೇಸ್ ದಾಖಲಾಗಿದೆ. ಈ ಪೈಕಿ ಹಾಲಿ ಕೇಸ್ 7,713 ಇದೆ. ಕರ್ನಾಟಕದ ಜನಸಂಖ್ಯೆ 6.41 ಕೋಟಿಯಷ್ಟಿದ್ದು, ಕರ್ನಾಟಕಕ್ಕಿಂತ ಅತ್ಯಂತ ಚಿಕ್ಕದಾಗಿರುವ ದೆಹಲಿಯಲ್ಲಿ ಕರೊನಾ ಏರುಗತಿಯಲ್ಲಿ ಸಾಗುತ್ತಿರುವುದು ಕೇಜ್ರಿವಾಲಾ ಅವರನ್ನು ಚಿಂತೆಗೀಡು ಮಾಡಿದೆ.
ಇದೇ ಕಾರಣಕ್ಕೆ ಮದುವೆ ಮತ್ತಿತರ ಸಮಾರಂಭಗಳಿಗೆ 200 ಮಂದಿ ಅತಿಥಿಗಳಿಗೆ ಸೇರಲು ಅವಕಾಶ ನೀಡಿದ್ದ ಆದೇಶವನ್ನು ಹಿಂಪಡೆಯಲು ನಿರ್ಧರಿಸಿರುವ ಅವರು, ಕರೊನಾ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಬಹುದಾದ ಮಾರುಕಟ್ಟೆ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ಅಧಿಕಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿಗೆ ಮುಂದಾಗಿದ್ದಾರೆ.
ಈ ಕುರಿತು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಕಳುಹಿಸಲಾಗಿದೆ.
'ಕೇಂದ್ರದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳ ಪ್ರಕಾರ, ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ವಿವಾಹ ಮತ್ತಿತರ ಕಾರ್ಯಕ್ರಮಗಳಲ್ಲಿ 200 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈಗ ಸೋಂಕಿನ ಪ್ರಮಾಣ ಏರುತ್ತಿರುವುದರಿಂದ ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ' ಎಂದು ಕೇಜ್ರಿವಾಲಾ ಹೇಳಿದರು.
'ದೀಪಾವಳಿ ಹಬ್ಬದ ಸಮಯದಲ್ಲಿ ರಾಜಧಾನಿಯ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಜನರು ಮಾಸ್ಕ್ ಧರಿಸದೇ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೇ ಓಡಾಡುತ್ತಿದ್ದದು ಕಂಡುಬಂದಿತ್ತು. ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿರುವ ಇಂಥ ಕಡೆಗಳಲ್ಲಿ ಕರೊನಾ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಮಾರುಕಟ್ಟೆ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಬೇಕಾದ ಅನಿವಾರ್ಯವಿದೆ' ಎಂದು ಹೇಳಿದರು.