ದೇಶದಲ್ಲಿಯೇ ಪ್ರಥಮ ಕಾಸ್ಮೆಟಿಕ್ ಪಾರ್ಕ್ ಸ್ಥಾಪನೆ: ಮನವಿ ಸಲ್ಲಿಸಲು ಸವಿತಾ ಸಮಾಜದ ನಿರ್ಧಾರ

cosmetic
Published on

ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿ ಕೇಶ ರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉತ್ಪಾದನೆ ಪಾರ್ಕ್ ಸ್ಥಾಪಿಸಲು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ನರೇಶ್ ಕುಮಾರ್ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು 300 ಕೋಟಿ ರೂ.ವೆಚ್ಚದ ಈ ಯೋಜನೆಯಡಿ ಕಾಸ್ಮೆಟಿಕ್ ಪಾರ್ಕ್ ಸ್ಥಾಪನೆಗೆ 150 ಎಕರೆ ಜಾಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇತ್ತೀಚಿನ ದಿನಗಳಲ್ಲಿ ಕ್ಷೌರ ಅಥವಾ ಕೇಶ ವಿನ್ಯಾಸ ಉದ್ಯಮವನ್ನು ಮತ್ತಷ್ಟು ಉತ್ತೇಜಿಸಿ ಅಭಿವೃದ್ಧಿಪಡಿಸಲು ವಿಶೇಷ ವಲಯ ಸ್ಥಾಪಿಸಲು ಅಗತ್ಯವಿದೆ. ಉತ್ಪಾದನಾ ಪಾರ್ಕ್‌ನಲ್ಲಿ ಕೇಶ ಸಂಗ್ರಹಣಾ ಬ್ಯಾಂಕ್, ರಫ್ತು ಉತ್ತೇಜನ ಹಾಗೂ ರಾಷ್ಟ್ರೀಯ ಮಟ್ಟದ ತರಬೇತಿ ಅಕಾಡೆಮಿ ಸೇರಿ ಇತರೆ ಸೌಲಭ್ಯಗಳು ಇರಲಿವೆ ಎಂದರು.

6ರಿಂದ ಪ್ರದರ್ಶನ: ಕೇಶ ಆರೈಕೆ ಸಂಬಂಧಿತ ಚಟುವಟಿಕೆ ಉತ್ತೇಜಿಸಲು ನಿಗಮ ವತಿಯಿಂದ ಆ.6ರಿಂದ ಆ.9ರವರೆಗೆ ಮಾನ್ಯತಾ ಟೆಕ್ ಪಾರ್ಕ್‌ನ ಸಮೀಪದ ಮ್ಯಾನ್‌ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕೇಶ ಆರೈಕೆ ಸಲೂನ್ ಮತ್ತು ಸ್ಪಾ ವಸ್ತು ಪ್ರದರ್ಶನ ನಡೆಯಿಲಿದೆ. ಇದರಲ್ಲಿ ಕೇಶ ಆರೈಕೆ ಮತ್ತು ಸೌಂದರ್ಯವರ್ಧನೆಗೆ ಬೇಕಾದ ಹೊಸ ಶೈಲಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ನರೇಶ್ ಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net