ಹೃದಯಾಘಾತ: ವಿಧಾನ ಪರಿಷತ್​ ಸದಸ್ಯ ಪ್ರಸನ್ನಕುಮಾರ್​ ಪುತ್ರ ನಿಧನ

suhas
Published on

ಶಿವಮೊಗ್ಗ: ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಮಗ ಸುಹಾಸ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು.

ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದ ಸುಹಾಸ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮನೆಯ ಮಹಡಿಯಿಂದ ಇಳಿಯುವ ವೇಳೆ ಹೃದಯಾಘಾತದಿಂದಾಗಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನ ನಂಜಪ್ಪ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಸನ್ನ ಕುಮಾರ್ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಕೊನೆಯ ಬಾರಿಯೂ ಮಗನ ಮುಖ ನೋಡಲು ಆಗಲಿಲ್ಲ ಎನ್ನಲಾಗಿದೆ.

ಪ್ರಸನ್ನ ಅವರ ಹಿರಿಯ ಮಗ ಸೂರಜ್ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸುಹಾಸ್ ಶಿವಮೊಗ್ಗದಲ್ಲೆ ಪೆಟ್ರೋಲ್ ಬಂಕ್ ನೋಡಿಕೊಳ್ಳುತ್ತಿದ್ದರು. ಮೂರು ವರ್ಷದ ಹಿಂದೆ ಮದುವೆಯಾಗಿತ್ತು.

2013ರಲ್ಲಿ ಸ್ನೇಹಿತರೊಂದಿಗೆ ಮಂಡಗದ್ದೆಗೆ ತೆರಳಿ, ಶಿವಮೊಗ್ಗಕ್ಕೆ ವಾಪಸಾಗುತ್ತಿದ್ದ ವೇಳೆ ಸುಹಾಸ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅಂದಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಪಘಾತ ನಂತರ ಹಲವು ಬಾರಿ ಶಸ್ತ್ರಚಿಕಿತ್ಸೆ ನಡೆದಿತ್ತು. ಆದರೂ, ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ.

ಭಾನುವಾರ ಸಂಜೆ 4ಕ್ಕೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net