

ಕಠ್ಮಂಡು (ನೇಪಾಳ): ನೇಪಾಳದ ಕಠ್ಮಂಡುವಿನಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ, ಯುವತಿಯೊಬ್ಬರ ಜತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮದ್ಯದ ಬಾಟಲುಗಳಿಂದ ತುಂಬಿರುವ ಈ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಮದ್ಯ ಹೀರುತ್ತಿರುವ ಯುವತಿಯೊಬ್ಬಳ ಜತೆ ಕಾಣಿಸಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದು ಪಬ್, ನೈಟ್ಕ್ಲಬ್ನಲ್ಲಿ ನಡೆಯುತ್ತಿರುವ ಪಾರ್ಟಿ ಎಂಬಿತ್ಯಾದಿಯಾಗಿ ಸುದ್ದಿಯಾಗಿದ್ದು, ಜಾಲತಾಣದಲ್ಲಿ ಇದರ ಬಗ್ಗೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ.
ಬಿಜೆಪಿಯ ಬೆಂಬಲಿಗರು ಈ ವಿಡಿಯೋ ಹಂಚಿಕೊಂಡು, ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ಇವರು ಎಂದು ಲೇವಡಿ ಮಾಡಿದ್ದಾರೆ.
ಈ ವೈರಲ್ ವಿಡಿಯೋದ ಬಗ್ಗೆ ಕಿಡಿ ಕಾರಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರಾಹುಲ್ ಗಾಂಧಿಯವರು ತಮ್ಮ ಸ್ನೇಹಿತೆಯ ಮದುವೆಗೆ ಕಠ್ಮಂಡುವಿಗೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ? ಇದೇನು ನೈಟ್ಕ್ಲಬ್ ಅಲ್ಲ. ಮದುವೆ ಪಾರ್ಟಿಯಲ್ಲಿ ಭಾಗವಹಿಸುವುದು ಅಪರಾಧ ಎಂದು ಎಲ್ಲಿಯಾದರೂ ಉಲ್ಲೇಖವಾಗಿದೆಯಾ ಎಂದು ತಿರುಗೇಟು ನೀಡಿದ್ದಾರೆ. ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ವಿಷಯವಾಗಿದೆ. ಮದುವೆಯಾಗುವುದು, ಯಾರೊಂದಿಗಾದರೂ ಸ್ನೇಹಿತರಾಗುವುದು ಅಥವಾ ಅವರ ಮದುವೆಯಲ್ಲಿ ಪಾಲ್ಗೊಳ್ಳುವುದು ಈ ದೇಶದಲ್ಲಿ ಇನ್ನೂ ಅಪರಾಧವಾಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯವರು ರಾಹುಲ್ ಗಾಂಧಿಯ ಈ ವಿಡಿಯೋ ವೈರಲ್ ಮಾಡುವುದನ್ನು ಬಿಟ್ಟು ಮೊದಲು ನಿಮ್ಮ ಕೆಲಸ ನೋಡಿಕೊಳ್ಳಿ. ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಅದರತ್ತ ಮೊದಲು ಗಮನ ಹರಿಸಿ. ಆಮೇಲೆ ರಾಹುಲ್ ಗಾಂಧಿ ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎನ್ನುವುದುನ್ನು ನೋಡಿ ಎಂದು ಕಿಡಿ ಕಾರಿದ್ದಾರೆ.
“ರಾಹುಲ್ ಗಾಂಧಿ ಕಠ್ಮಂಡುವಿನಲ್ಲಿ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ಮೊದಲು ವಿದ್ಯುತ್ ಬಿಕ್ಕಟ್ಟು, ಹಣದುಬ್ಬರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ, ಅದನ್ನು ಬಿಟ್ಟು ರಾಹುಲ್ ಬಗ್ಗೆ ಚಿಂತೆಯೇಕೆ ಎಂದು ಪ್ರಶ್ನಿಸಿದ್ದಾರೆ.