ತೆಲಂಗಾಣದಲ್ಲಿ ರಾಹುಲ್​ ಗಾಂಧಿಗೆ ಭಾರಿ ಮುಖಭಂಗ: ಉಸ್ಮಾನಿಯಾ ವಿವಿಯಲ್ಲಿ ನೋ ಎಂಟ್ರಿ!

rahul
Published on

ಹೈದರಾಬಾದ್: ತೆಲಂಗಾಣಕ್ಕೆ ಎರಡು ದಿನಗಳ ಭೇಟಿ ನೀಡಲಿರುವ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿಗೆ ಭಾರಿ ಮುಖಭಂಗವಾಗಿದೆ. ಇಲ್ಲಿಯ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಇವರಿಗೆ ಪ್ರವೇಶ ನಿರಾಕರಿಸಲಾಗಿದೆ.

ರಾಹುಲ್​ ಗಾಂಧಿಯವರು ಮೇ 6 ಮತ್ತು 7 ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹೈದರಾಬಾದ್​ನಲ್ಲಿರುವ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ರಾಜಕೀಯೇತರ ಸಭೆಯನ್ನು ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಅವರಿಗೆ ವಿಶ್ವವಿದ್ಯಾಲಯದಲ್ಲಿ ಪ್ರವೇಶ ನೀಡಲಿಲ್ಲ. ಇದಕ್ಕೆ ಕಾರಣ ನೀಡಿರುವ ವಿಶ್ವವಿದ್ಯಾಲಯದ ಕುಲಪತಿಗಳು, ಕ್ಯಾಂಪಸ್‌ನಲ್ಲಿ ಯಾವುದೇ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ ಎಂದಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನೇತೃತ್ವದ ರಾಜ್ಯ ಸರ್ಕಾರವು ರಾಹುಲ್ ಗಾಂಧಿ ಭೇಟಿ ನೀಡುವುದನ್ನು ತಡೆಯುವಂತೆ ಸಂಸ್ಥೆಗೆ ಒತ್ತಾಯಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದರೆ, ರಾಹುಲ್ ಗಾಂಧಿ ಅವರ ಭೇಟಿಗೆ ಅವಕಾಶ ನೀಡುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಹೈಕೋರ್ಟ್​ಗೂ ಅರ್ಜಿ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ.

ಪ್ರತಿಭಟನಾ ನಿರತ ಎನ್‍ಎಸ್‍ಯುಐ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲು ಸರ್ಕಾರ ಅನುಮತಿ ನೀಡದಿದ್ದರೆ ಜೈಲಿನಲ್ಲಿಯೇ ರಾಹುಲ್​ ಗಾಂಧಿ ವಿದ್ಯಾರ್ಥಿಗಳನ್ನು ಭೇಟಿಯಾಗಲಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್​ ಹೇಳಿದೆ.

ರಾಹುಲ್​ ಅವರ ತೆಲಂಗಾಣ ರಾಜ್ಯ ಪ್ರವಾಸದ ನಿಮಿತ್ತ ವಾರಂಗಲ್‌ನಲ್ಲಿ 5 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ಪಕ್ಷ ಸಿದ್ಧತೆ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net