

ನವದೆಹಲಿ: ಪಂಬಾಜ್ ನ್ಯಾಷನಲ್ ಬ್ಯಾಂಕ್ಗೆ ಸಹಸ್ರಕೋಟಿ ರೂಪಾಯಿ ವಂಚಿಸಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ವಶಕ್ಕೆ ಪಡೆಯಲು ಡೊಮಿನಿಕಾಗೆ ಹೋಗಿದ್ದ ಭಾರತೀಯ ಅಧಿಕಾರಿಗಳ ತಂಡ ಬರಿಗೈಯಲ್ಲಿ ವಾಪಸಾಗಿದೆ. ಇದಕ್ಕೆ ಕಾರಣ, ಚೋಕ್ಸಿಯ ಕೇಸ್ ಕೋರ್ಟ್ನಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಸದ್ಯ ಅವರನ್ನು ಹಸ್ತಾಂತರಿಸಲಾಗದು ಎಂದು ಡೊಮಿನಿಕಾ ಹೇಳಿದೆ.
ಅದೇ ಇನ್ನೊಂದೆಡೆ, ಪ್ರೇಯಸಿ ಜತೆ ದ್ವೀಪದಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಚೋಕ್ಸಿ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೋಕ್ಸಿ ಪತ್ನಿ ಪ್ರೀತಿ, ತಮ್ಮ ಪತಿ ಅಂಥವರಲ್ಲ, ಸುಖಾಸುಮ್ಮನೆ ಸುದ್ದಿ ಮಾಡಲಾಗುತ್ತಿದೆ. ಆ ಯುವತಿಯ ಜತೆ ವಾಯುವಿಹಾರಕ್ಕೆ ಹೋಗಿದ್ದಾರಷ್ಟೇ. ಉಳಿದದ್ದು ಏನೂ ನಡೆದಿಲ್ಲ ಎಂದಿದ್ದಾರೆ.
ಸಹಸ್ರಾರು ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗುತ್ತಿದ್ದಂತೆಯೇ ಭಾರತದಿಂದ ಚೋಕ್ಸಿ ಎಸ್ಕೇಪ್ ಆಗಿದ್ದರು. ನಂತರ ಡೊಮಿನಿಕಾದಲ್ಲಿ ಓರ್ವ ಮಹಿಳೆ ಜತೆ ಸಿಕ್ಕಿಬಿದ್ದಿದ್ದರು. ಅವರನ್ನು ಕರೆತರಲು ಇಬ್ಬರು ಸಿಬಿಐ ಅಧಿಕಾರಿಗಳ ಸಹಿತ ಒಟ್ಟು ಎಂಟು ಅಧಿಕಾರಿಗಳ ತಂಡ ಮೇ 28ಕ್ಕೆ ಡೊಮೆನಿಕಾಗೆ ತೆರಳಿತ್ತು.
ಚೋಕ್ಸಿಯನ್ನು ಡೊಮಿನಿಕಾ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆಯೇ ಹಾಗೂ ಅವರನ್ನು ಯಾವ ದೇಶಕ್ಕೆ ವಾಪಾಸ್ ಕಳುಹಿಸಬೇಕು ಎಂಬ ಬಗ್ಗೆ ಅಲ್ಲಿಯ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಅದು ಇತ್ಯರ್ಥ ಆಗುವವರೆಗೆ ಭಾರತಕ್ಕೆ ಹಸ್ತಾಂತರಿಸುವುದು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಕನಿಷ್ಠ ಒಂದು ತಿಂಗಳು ಅವರನ್ನು ಕರೆತರಲು ಕಷ್ಟ ಎಂದಿದ್ದಾರೆ ಅಧಿಕಾರಿಗಳು.
ಸದ್ಯ ಡೊಮಿನಿಕಾ ಪೊಲೀಸ ವಶದಲ್ಲಿರುವ ಮೆಹುಲ್ ಚೋಕ್ಸಿ ಡೊಮಿನಿಕಾ-ಚೀನಾ ಫ್ರೆಂಡ್ಶಿಪ್ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.