ಅತ್ಯಾಚಾರ ಆರೋಪಿ ಜೈಲಲ್ಲಿ ನೇಣಿಗೆ ಶರಣು- ಬಾಲಕಿಯ ರೇಪ್‌ ಮಾಡಿ ಸಿಕ್ಕಿಬಿದ್ದಿದ್ದ ಸಿಂದಗಿಯ ಕಾಮುಕ

vijayapura
Published on

ವಿಜಯಪುರ: ಒಂದೆಡೆ ಮೈಸೂರಿನಲ್ಲಿ ನಿರ್ಜನ ಪ್ರದೇಶದಲ್ಲಿ ಗೆಳೆಯನ ಜತೆ ಹೋದ ಯುವತಿಯ ಮೇಲೆ ಗ್ಯಾಂಗ್‌ರೇಪ್‌ ಪ್ರಕರಣ ಇದೀ ರಾಜ್ಯದಲ್ಲಿಯೇ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ಅತ್ತ ವಿಜಯಪುರ ಜಿಲ್ಲೆಯ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದ.

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷದ ಬಾಲಕಿ ಮೇಲೆ ಡಾಬಾ ಮಾಲೀಕನೇ ಅತ್ಯಾಚಾರವೆಸಗಿದ್ದ. ನಿನ್ನೆ ಸಂಜೆ ಈ ಘಟನೆ ನಡೆದಿತ್ತು. ಈ ಸಂಬಂಧ ಬಾಲಕಿಯ ತಂದೆ ದೇವಿಂದ ಸಂಗೋಗಿ ಎಂಬ ಡಾಬಾ ಮಾಲೀಕನ ವಿರುದ್ಧ ದೂರು ನೀಡಿದ್ದರು. ದೂರು ನೀಡುತ್ತಲೇ ಆತ ಸ್ಥಳದಿಂದ ಪರಾರಿಯಾಗಿದ್ದ.

ತೀವ್ರಗತಿಯಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು ತಡರಾತ್ರಿ ಆತನನ್ನು ಬಂಧಿಸಿದ್ದರು. ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜೈಲಿನಲ್ಲಿಯೇ ಯುವಕ ಹೆಣವಾಗಿದ್ದಾನೆ. ಶೌಚಗೃಹದಲ್ಲಿ ಆತ ನೇಣಿಗೆ ಶರಣಾಗಿದ್ದಾನೆ.

ಆದರೆ ಇದು ಕಸ್ಟಡಿಯಲ್ಲಿರುವ ಸಾವು ಎಂದು ಯುವಕನ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ನಿರ್ಲಕ್ಷ್ಯದಿಂದ ಆತ ಸತ್ತಿದ್ದಾನೆ ಎಂದು ಸಿಂದಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಪೊಲೀಸರೊಂದಿಗೆ ಮಾತಿನ ಚಕಮಕಿ ಉಂಟಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟ ಕಾರಣ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ದೇವಿಂದ್ರನ ಶವವನ್ನು ಜಿಲ್ಲಾ ಆಸ್ಪತ್ರೆಗೆ ಪೊಲೀಸರು ತಂದಿದ್ದು, ಅಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್‌ ಅಧಿಕಾರಿ, ತಡರಾತ್ರಿ ಆರೋಪಿಯ ಬಂಧನವಾಗಿತ್ತು. ನಸುಕಿನ ಜಾವ ಶೌಚಗೃಹಕ್ಕೆ ತೆರಳಿದ್ದ ಆರೋಪಿ ಅಲ್ಲಿ ನೇಣು ಹಾಕಿಕೊಂಡಿದ್ದಾನೆ. ಇದನ್ನು ಕಂಡ ನಮ್ಮ ಸಿಬ್ಬಂದಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಮೃತಪಟ್ಟಿದ್ದಾನೆ ಎಂದಿದ್ದಾರೆ.

ಲಾಕಪ್ ಡೆತ್ ಎನ್ನಬಹುದಾದರೂ ಪೊಲೀಸರ‌ ಕಿರುಕುಳದಿಂದ ಆರೋಪಿ ಮೃತಪಟ್ಟಿಲ್ಲ. ನೇಣು ಹಾಕಿಕೊಂಡಿದ್ದ ಕಾರಣ‌ ಮೃತಪಟ್ಟಿದ್ದಾನೆ. ಇಂಥ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ. ಈ ಘಟನೆ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ. ಮೃತನ ಪೋಷಕರು ಹಾಗೂ ಸಂಬಂಧಿಕರಿಂದ ಪೊಲೀಸ್ ಠಾಣೆ ಎದುರಿಗೆ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಇಂಥ ಘಟನೆಯಿಂದ ಸಹಜವಾಗಿ ಮನೆಯವರಿಗೆ ನೋವಾಗುತ್ತದೆ. ಆದರೆ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net