ಆಸ್ತಿ ನಿಮ್ಮ ಹೆಸರಿಗೆ ವಿಲ್‌ ಆದ ಮಾತ್ರಕ್ಕೆ ಅದು ನಿಮ್ಮದಾಗಲ್ಲ- ಯಾವಾಗ ಬೇಕಾದ್ರೂ ಬದಲಾಗಬಹುದು!

nyayadevate
Published on
ನಮ್ಮ ಚಿಕ್ಕಪ್ಪನಿಗೆ ಮಕ್ಕಳಿಲ್ಲ. ಅವರ ಬಳಿಕ ಆಸ್ತಿಗಳೆಲ್ಲಾ ನಮ್ಮ ಚಿಕ್ಕಮ್ಮನ ಹೆಸರಿಗೆ ಖಾತೆ ಆಯಿತು. ಅವರನ್ನು 35 ವರ್ಷಗಳಿಂದ ನಾನೇ ಸಾಕಿದ್ದೆ. ಹೀಗಾಗಿ ಐದು ವರ್ಷಗಳ ಹಿಂದೆ ನನಗೆ ಅವರು ಎಲ್ಲ ಆಸ್ತಿಗಳನ್ನೂ ವಿಲ್‌ ಮಾಡಿದ್ದರು.

ಆಸ್ತಿಗಳನ್ನೂ ನಾನೇ ನೋಡಿಕೊಳ್ಳುತ್ತಿದ್ದೆ. ಲಕ್ಷಾಂತರ ರೂಪಾಯಿಯ ವ್ಯವಹಾರ ಮಾಡುತ್ತಿದ್ದೆ. ಅವರ ಆಸ್ತಿ ನನಗೆ ಬರುತ್ತದೆ ಎಂದು ನನ್ನ ಸ್ವಂತ ತಂದೆ ತಮ್ಮ ಆಸ್ತಿಗಳನ್ನೆಲ್ಲ ನನ್ನ ತಮ್ಮನಿಗೇ ಹತ್ತು ವರ್ಷಗಳ ಹಿಂದೆಯೇ ದಾನ ಪತ್ರ ಮಾಡಿಸಿ ನೋಂದಣಿ ಮಾಡಿಸಿದರು. ಈಗ ನಮ್ಮ ತಂದೆ ತಾಯಿಯೂ ಇಲ್ಲ. ನನ್ನ ಜೊತೆಗೇ ಇದ್ದ ನಮ್ಮ ಚಿಕ್ಕಮ್ಮನಿಗೂ ನನ್ನ ಹೆಂಡತಿಗೂ ಆಗಿ ಬರದೆ, ನನ್ನ ಚಿಕ್ಕಮ್ಮ ಎರಡು ವರ್ಷಗಳಿಂದ ಅವರ ಗಂಡನ ತಮ್ಮನ ಮಗನ ಹತ್ತಿರಹೋಗಿ ಸೇರಿಕೊಂಡಿದ್ದಾರೆ. ಏನು ಮಾಡಿದರೂ ಬರುತ್ತಿಲ್ಲ.

ಆಸ್ತಿಯನ್ನೆಲ್ಲಾ ಅವನ ಹೆಸರಿಗೇ ಗಿಫ್ಟ್/ದಾನ ಮಾಡಿಸಲು ಮುಂದಾಗಿದ್ದಾರೆ. ಇದು ಅನ್ಯಾಯವಲ್ಲವೇ? ಇದನ್ನು ತಪ್ಪಿಸುವುದು ಹೇಗೆ?

ಉತ್ತರ: ನಿಮ್ಮ ಚಿಕ್ಕಮ್ಮನಿಗೆ ಅವರ ಗಂಡ ಪವತಿ ಆದಮೇಲೆ ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ನೀವು ಕೇಳುವಂತಿಲ್ಲ. ನಿಮ್ಮ ಹೆಸರಿಗೆ ಮಾಡಿದ ವಿಲ್‌ ಯಾವಾಗ ಬೇಕಾದರೂ ಅವರು ಬದಲಾಯಿಸಬಹುದು.

ಬದಲಾಯಿಸದೇ ಹೋದರೂ ವಿಲ್‌ ಮಾಡಿದ ಆಸ್ತಿಯನ್ನು ಒಬ್ಬ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಬೇರೆಯವರಿಗೆ ದಾನ ಅಥವಾ ಕ್ರಯ ಮಾಡಿದರೆ, ವಿಲ್‌ ತಾನೇ ತಾನಾಗಿ ತನ್ನ ಸಿಂಧುತ್ವವನ್ನು ಕಳೆದುಕೊಳ್ಳುತ್ತದೆ. ಇಷ್ಟು ವರ್ಷಗಳ ಕಾಲ ನೀವು ಅವರ ಆಸ್ತಿಯನ್ನು ಅನುಭವಿಸಲು ನಿಮ್ಮನ್ನು ಬಿಟ್ಟಿದ್ದು ನಿಮ್ಮ ಅದೃಷ್ಟ. ನಿಮಗೆ ಆ ಆಸ್ತಿಯಲ್ಲಿ ಹಕ್ಕು ಇಲ್ಲ. ಬೇಕಿದ್ದರೆ ಹಿರಿಯರನ್ನು ಕರೆಯಿಸಿ ಮಾತಾಡಿ ಏನಾದರೂ ಅವರಿಂದ ಪ್ರೀತಿಯಿಂದ ಪಡೆಯಲು ನೋಡಿ. ಕೋರ್ಟಿಗೆ ಹೋದರೆ ನಿಮಗೆ ಪ್ರಯೋಜನ ಆಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net