ಶಾರುಖ್‌ರಿಂದ ದೀಪಾವಳಿ ಸಂದೇಶ ಕೊಡಿಸಿದ ಕ್ಯಾಡ್‌ಬರೀಸ್‌ಗೆ ಗ್ರಹಚಾರ- ಶುರುವಾಯ್ತು ಬೈಕಾಟ್‌ ಅಭಿಯಾನ

sharukhkhan
Published on

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿರುವ ಮಗ ಆರ್ಯನ್‌ ಖಾನ್‌ನಿಂದಾಗಿ ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಇದಾಗಲೇ ಭಾರಿ ಸಮಸ್ಯೆ ಉಂಟಾಗಿದೆ. ಹಲವಾರು ಕಂಪೆನಿಗಳಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿರುವ ಶಾರುಖ್‌ ಅವರನ್ನು ತಮ್ಮ ಅಂಬಾಸಿಡರ್‌ ಆಗಿ ಮುಂದವರೆಸಬೇಕೇ ಬೇಡವೇ ಎಂದು ಕಂಪೆನಿಗಳು ಯೋಚಿಸುತ್ತಿವೆ. ಅದರ ನಡುವೆಯೇ, ಬೈಜೂಸ್ ಲರ್ನಿಂಗ್ ಆ್ಯಪ್ ಸಂಸ್ಥೆಯು ನೇರಾನೇರವಾಗಿ ಇವರನ್ನು ತನ್ನ ಜಾಹೀರಾತಿನಿಂದ ಕೈಬಿಟ್ಟಿತ್ತು.

ಆದರೆ ಇದರ ನಡುವೆಯೇ ಕ್ಯಾಡ್‌ಬರೀಸ್‌ ಚಾಕಲೇಟ್‌ ಕಂಪೆನಿ ತನ್ನ ಬ್ರ್ಯಾಂಡ್‌ ಅಂಬಾಸಿಡರನ್ನಾಗಿ ಶಾರುಖ್‌ ಖಾನ್‌ ಅವರನ್ನು ನಿಯೋಜಿಸಿದೆ. ದೀಪಾವಳಿಯ ಹಿನ್ನೆಲೆಯಲ್ಲಿ ಕಂಪೆನಿ ಶಾರುಖ್‌ ಅವರನ್ನು ಆಯ್ದುಕೊಂಡಿದೆ. ಕರೊನಾ ವೈರಸ್‌ ಹಾಗೂ ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದ ಸಣ್ಣ ಉದ್ಯಮಗಳಿಗೆ ಶಾರುಖ್ ಖಾನ್‌ರನ್ನು ರಾಯಭಾರಿಯನ್ನಾಗಿಸುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿರುವ ಕ್ಯಾಡ್‌ಬರಿ, ನಾವು ಭಾರತದ ಅತಿದೊಡ್ಡ ಬ್ರಾಂಡ್ ಅಂಬಾಸಿಡರ್ ಶಾರುಖ್‌ ಖಾನ್‌ರನ್ನು ಸಣ್ಣ ವ್ಯಾಪರಿಗಳ ಬ್ರಾಂಡ್ ಅಂಬಾಸಿಡರ್ ಮಾಡುವ ಮೂಲಕ ನೂರಾರು ಸಣ್ಣ ಉದ್ಯಮಗಳಿಗೆ ಸಹಾಯ ಮಾಡಿದ್ದೇವೆ ಎಂದು ಹೇಳಿದೆ.

ಈ ವಿಡಿಯೋದಲ್ಲಿ ಶಾರುಖ್‌ ಖಾನ್‌ ಅವರು, ಕೆನೆ ಬಣ್ಣದ ಶೇರ್ವಾನಿ ಧರಿಸಿ ಕಾಣಿಸಿಕೊಂಡಿರುವ ಶಾರುಕ್‌, ಬಟ್ಟೆ, ಶೂಸ್‌, ಸಿಹಿತಿಂಡಿಗಳು, ಗ್ಯಾಜೆಟ್‌ಗಳು ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುವಂತೆ ಮನವಿ ಮಾಡುವುದನ್ನು ಈ ಜಾಹೀರಾತಿನಲ್ಲಿ ಕಾಣಬಹುದಾಗಿದೆ.

ಐಷಾರಾಮಿ ಜೀವನ ಸಾಗಿಸುತ್ತಾ, ಮಗನಿಗೆ ಪಾಕೆಟ್‌ ಮನಿ ರೂಪದಲ್ಲಿ ದಿನವೊಂದಕ್ಕೆ ಲಕ್ಷಗಟ್ಟಲೆ ಹಣ ಕೊಟ್ಟು ಡ್ರಗ್ಸ್‌ ವ್ಯವಹಾರದಲ್ಲಿ ಸಿಲುಕುವಂತೆ ಮಾಡಿರುವ ಶಾರುಖ್‌ ಖಾನ್‌ರಿಂದ ನಾವು ನೀತಿ ಕಲಿಯಬೇಕೆ ಎಂದು ಹಲವಾರು ಮಂದಿ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ದೀಪಾವಳಿ ಹಬ್ಬಕ್ಕೆ ಬುದ್ಧಿ ಹೇಳಲು ಶಾರುಖ್‌ ಖಾನ್‌ ಅರ್ಹರೆ ಎಂದು ಹಲವರು ಕ್ಯಾಡ್‌ಬರಿ ಕಂಪೆನಿಗೆ ವಾಚಾಮಗೋಚರವಾಗಿ ಬೈದಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೀಗ ಕ್ಯಾಡ್‌ಬರಿ ವಿರುದ್ಧ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ಶುರುವಾಗಿದೆ ಬೈಕಾಟ್‌ ಕ್ಯಾಡ್‌ಬರಿ ಎನ್ನುವ ಹೆಸರಿನಲ್ಲಿ ಕ್ಯಾಡ್‌ಬರಿ ಚಾಕಲೇಟ್‌ ವಿರುದ್ಧ ಅಭಿಯಾನ ಶುರು ಮಾಡಲಾಗಿದೆ. ವಿದೇಶಿ ಕಂಪೆನಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹಲವರು ಕಿಡಿ ಕಾರಿದ್ದರೆ, ತಾವು ಇನ್ನುಮುಂದೆ ಈ ಚಾಕಲೇಟ್ ಮುಟ್ಟಿಯೂ ನೋಡಲ್ಲ ಎಂದಿದ್ದಾರೆ ಇನ್ನು ಕೆಲವರು. ಇದರಿಂದ ಕ್ಯಾಡ್‌ಬರಿ ಕಂಪೆನಿ ಪೇಚಿಗೆ ಸಿಲುಕಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net