

ಭೋಪಾಲ್: ಗಂಡ ದೊಡ್ಡ ಉದ್ಯಮಿ. ಕೋಟಿ ಕೋಟಿಗಟ್ಟಲೆ ಹಣದ ಒಡೆಯ. ಆದರೆ ಈ ಗಂಡನ ಜತೆ ಸಮಾಧಾನ ಕಾಣದ ಮಹಿಳೆಯೊಬ್ಬಳು ತನಗಿಂದ 13 ವರ್ಷ ಚಿಕ್ಕವನಾದ ಆಟೋ ಡ್ರೈವರ್ ಜತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಪತ್ನಿಯ ನಾಪತ್ತೆಯಿಂದ ಕಂಗಾಲಾಗಿರುವ ಗಂಡ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಇಂದೋರ್‌ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಹೊರಗಡೆ ಹೋದಾಗಲೆಲ್ಲಾ ಈ ಆಟೋದಲ್ಲಿಯೇ ಮನೆಗೆ ಬರುತ್ತಿದ್ದಳು. ಹೀಗೆ ಸ್ನೇಹ ಪ್ರೇಮಕ್ಕೆ ತಿರುಗಿ ಆಟೋ ಡ್ರೈವರ್ ಇಮ್ರಾನ್ ತನ್ನ ಪತ್ನಿಯನ್ನು ಯಾಮಾರಿಸಿಕೊಂಡು ಹೋಗಿದ್ದಾನೆ ಎಂದು ಗಂಡ ದೂರಿದ್ದಾನೆ. ಪತ್ನಿಗೆ 45 ವರ್ಷ ವಯಸ್ಸಾಗಿದ್ದು, ಆ ಆಟೋ ಚಾಲಕನಿಗೆ 32 ವರ್ಷ ವಯಸ್ಸು. ಮನೆಯಲ್ಲಿದ್ದ 47 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ಹೇಳಿದ್ದಾನೆ.
ದಿನವೂ ಪತ್ನಿ ಎಲ್ಲಿಗೋ ಹೋಗುತ್ತಿದ್ದಳು. ರಾತ್ರಿ ಈ ಆಟೋದಲ್ಲಿ ಬರುತ್ತಿದ್ದಳು. ಇದ್ದಕ್ಕಿದ್ದಂತೆಯೇ ಒಮ್ಮೆ ನಾಪತ್ತೆಯಾದಳು. ರಾತ್ರಿಯಾದರೂ ಬರಲಿಲ್ಲ. ಆಮೇಲೆ ಆಕೆ ಅದೇ ಆಟೋ ಡ್ರೈವರ್ ಇಮ್ರಾನ್ ಜತೆ ಓಡಿಹೋಗಿರುವುದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಮತ್ತು ಆಕೆಯ ಪ್ರಿಯತಮನಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಇದೇ ವೇಳೆ ಇಮ್ರಾನ್ 32 ಲಕ್ಷ ರೂಪಾಯಿಗಳನ್ನು ತನ್ನ ಸ್ನೇಹಿತನ ಮನೆಯಲ್ಲಿ ಇಟ್ಟುಹೋಗಿರುವ ವಿಷಯ ತಿಳಿದಿದೆ. ಆತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸುತ್ತಲಿನ ಪ್ರದೇಶಗಳಲ್ಲಿ ಇವರಿಗಾಗಿ ಹುಡುಕಾಟ ಮುಂದುವರೆದಿದೆ.