ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೇ 'ಅಪ್ಪನ ದಿನ'ದ ಶುಭಾಶಯ ಪತ್ರ! ಭಾವುಕರಾದ ಜಡ್ಜ್​- ಜಾಮೀನು ಮಂಜೂರು

letter
Published on

ಮುಂಬೈ: ನೀನು ನನ್ನ ಹುಟ್ಟಿಸಿದ ಅಪ್ಪನಲ್ಲ, ಆದರೆ ನನ್ನ ಅಮ್ಮನ ಗೆಳೆಯ. ಪ್ರತಿದಿನ ನನಗಾಗಿ ಇರುವವನು. ನನ್ನ ನಿಜವಾದ ಅಪ್ಪ ನೀನೇ. ನಿನಗೆ ಅಪ್ಪನ ದಿನದ ಶುಭಾಶಯಗಳು...

ಹೀಗೆಂದು ಬಾಲಕನೊಬ್ಬ ಜೈಲಿನಲ್ಲಿರುವ ತನ್ನ ಅಮ್ಮನ ಸ್ನೇಹಿತನಿಗೆ ಎರಡು ಪತ್ರ ಕಳುಹಿಸಿದ್ದ. ಆತನ ಮುದ್ದಾದ ಅಕ್ಷರಗಳಿಂದ ಬಣ್ಣಬಣ್ಣದ ಪೆನ್ಸಿಲ್​ಗಳಿಂದ ಬರೆದ ಈ ಪತ್ರವನ್ನು ನೋಡಿ ಖುದ್ದು ಹೈಕೋರ್ಟ್​ ನ್ಯಾಯಮೂರ್ತಿಗಳು ಭಾವುಕರಾಗಿರುವ ಘಟನೆ ನಡೆದಿದೆ. ಕೊನೆಗೆ ಆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜೈಲುಪಾಲಾಗಿರುವ ಆ ವ್ಯಕ್ತಿಗೆ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದ್ದಾರೆ.

ಆಗಿದ್ದೇನು?

ಇದು ನಡೆದಿರುವುದು ಮುಂಬೈನಲ್ಲಿ. 42 ವರ್ಷ ವಯಸ್ಸಿನ ವಿಚ್ಛೇದಿತ ಮಹಿಳೆ, 2018 ರಲ್ಲಿ ಇಬ್ಬರು ಮಕ್ಕಳೊಂದಿಗೆ ಯುವಕನ ಜತೆ ವಾಸಿಸುತ್ತಿದ್ದಳು. ಆದರೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು. ನಂತರ ಇಬ್ಬರೂ ಪ್ರತ್ಯೇಕವಾಗಿದ್ದರು. ಆದರೆ ಈಕೆಯ ಒಬ್ಬ ಮಗ ಅಮ್ಮನ ಗೆಳೆಯನ ಜತೆಗೇ ನೆಲೆಸಿದ್ದ.

ಸ್ವಲ್ಪ ದಿನದ ಬಳಿಕ ತನ್ನ ಗೆಳೆಯನ ವಿರುದ್ಧ ಮಹಿಳೆ ದೂರು ದಾಖಲು ಮಾಡಿದ್ದಳು. ತನ್ನ ಗೆಳೆಯ ತನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ಗಂಭೀರ ಆರೋಪ ಮಾಡಿದ್ದಳು. ತನ್ನ ಮಗನ ಖಾಸಗಿ ಅಂಗಕ್ಕೆ ಆಗಿರುವ ಗಾಯಗಳ ಕುರಿತು ಕೆಲವೊಂದು ವೈದ್ಯಕೀಯ ವರದಿಯನ್ನೂ ಆಕೆ ನೀಡಿದ್ದಳು. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಅಡಿ, ಪೋಸ್ಕೊ ಕಾಯ್ದೆ ಅಡಿ ಗೆಳೆಯನನ್ನು ಜೈಲಿನಲ್ಲಿ ಇರಿಸಲಾಗಿತ್ತು. ಜಾಮೀನು ಕೋರಿ ಆತ ಹೈಕೋರ್ಟ್​ ಮೊರೆ ಹೋಗಿದ್ದ. ಅದರ ವಿಚಾರಣೆ ಇನ್ನೂ ಇತ್ಯರ್ಥಕ್ಕೆ ಬಾಕಿ ಇತ್ತು.

2020ರಲ್ಲಿ ಈ ಘಟನೆ ನಡೆದಿತ್ತು. ಇದರ ವಿಚಾರಣೆ ಇಂದಿಗೂ ನಡೆಯುತ್ತಿದೆ. ಇದರ ನಡುವೆಯೇ ಮೊನ್ನೆ ಜೂನ್​ 19ರಂದು ಅದೇ ಸಂತ್ರಸ್ತ ಎನಿಸಿಕೊಂಡಿರುವ ಬಾಲಕ ಈತನಿಗೆ ಎರಡು ಪತ್ರಗಳನ್ನು ಬರೆದಿದ್ದಾನೆ. ನೀನು ನನ್ನ ಹುಟ್ಟಿಸಿದ ತಂದೆಯಲ್ಲ, ಆದರೆ ನೀನೇ ನನಗೆ ಎಲ್ಲಾ, ನನ್ನ ಅಮ್ಮನ ಗೆಳೆಯನಾದ ನೀನೇ ನನಗೆ ಅಪ್ಪ ಎಂದು ಅಪ್ಪನ ದಿನದ ಶುಭಾಶಯ ಪತ್ರ ಕಳುಹಿಸಿದ್ದಾನೆ.

ಈ ಪತ್ರವನ್ನು ನೋಡಿದ ಹೈಕೋರ್ಟ್​ ನ್ಯಾಯಮೂರ್ತಿಗಳು ಒಮ್ಮೆ ಭಾವುಕರಾದರು. ಕೊನೆಗೆ ಈ ಕೇಸ್​ನ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ನಿಜವಾಗಿಯೂ ಆ ವ್ಯಕ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದೇ ಹೌದಾದರೆ ಆತ ಈ ರೀತಿ ಪತ್ರ ಬರೆಯಲು ಸಾಧ್ಯವೇ ಇಲ್ಲ ಎಂದು ನ್ಯಾಯಮೂರ್ತಿಗಳಿಗೆ ಅನ್ನಿಸಿದೆ. ನಂತರ ಆರೋಪಿಯ ಪರ ವಕೀಲರು ಕೂಡ ತಮ್ಮ ಕಕ್ಷಿದಾರರ ಯಾವುದೇ ತಪ್ಪು ಇಲ್ಲ. ಮಹಿಳೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆ ಆರೋಪ ಮಾಡಿದ್ದಾಳೆ ಎಂದರು.

ಮಹಿಳೆ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿಯಲ್ಲಿ ಆರೋಪಿ ನೋಡಿಕೊಳ್ಳುತ್ತಿದ್ದು, ಆತನ ಯಾವುದೇ ತಪ್ಪು ಇಲ್ಲ. ತನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಹೇಳಿದ್ದಾಳೆ. ಆದರೆ ವೈದ್ಯಕೀಯ ವರದಿಯನ್ನು ನೋಡಿದಾಗ ಅದು ಸ್ಪಷ್ಟವಾಗಿ ಯಾವುದೇ ಉಲ್ಲೇಖವಿಲ್ಲ. ಇದರ ಹೊರತಾಗಿಯೂ ಆತನ ವಿರುದ್ಧ ಕೇಸ್​ ದಾಖಲಾಗಿದೆ ಎಂದರು.

ವಕೀಲರ ವಾದಕ್ಕಿಂತಲೂ ಮಿಗಿಲಾಗಿ ಬಾಲಕ ಬರೆದಿರುವ ಪತ್ರದ ಕಡೆ ನ್ಯಾಯಮೂರ್ತಿಗಳ ಗಮನ ಸೆಳೆಯಿತು. ಈ ಪತ್ರ ಬಾಲಕ ಮತ್ತು ಆರೋಪಿಯ ನಡುವಿನ ಭಾವನಾತ್ಮಕ ಸಂಬಂಧವನ್ನು ತೋರಿಸುತ್ತದೆ. ಇವರಿಬ್ಬರ ನಡುವಿನ ಅಗಾಧ ಪ್ರೀತಿಯನ್ನು ತೋರಿಸುತ್ತದೆ. ಇಂಥ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಲು ಸಾಧ್ಯವೇ ಇಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ ಎಂದ ನ್ಯಾಯಮೂರ್ತಿ ಸಂದೀಪ್ ಶಿಂಧೆ ಅವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net