

ಮುಂಬೈ: ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿತ ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪುಗಳನ್ನು ನೀಡಿ ದೇಶಾದ್ಯಂತೆ ಚರ್ಚೆಗೆ ಗ್ರಾಸವಾಗಿರುವ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗನೆಡಿವಾಲಾ ಅವರು ಇಂದಿನಿಂದ ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಬೇಕಿತ್ತು.
ಎರಡು ವರ್ಷಗಳ ಕಾಲ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನಂತರ ನಿನ್ನೆ ಶುಕ್ರವಾರ (ಫೆ.12) ಅವರು ಕಾಯಂ ನ್ಯಾಯಮೂರ್ತಿಯಾಗಬೇಕಿತ್ತು. ಆದರೆ ಇದೀಗ ಮೊದಲೇ ಸುಪ್ರೀಂಕೋರ್ಟ್ ಹೇಳಿದಂತೆ ಅವರನ್ನು ಮತ್ತೆ ಒಂದು ವರ್ಷದವರೆಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿಯೇ ಕೆಲಸ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.
ಪೋಕ್ಸೊ ಕಾಯಿದೆ ಅಡಿಯಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿತ ಪ್ರಕರಣಗಳ ವಿಚಾರಣೆ ವೇಳೆ ವಿವಾದಾತ್ಮಕ ತೀರ್ಪುಗಳನ್ನು ನೀಡಿದ ಬೆನ್ನಿಗೇ ನ್ಯಾ. ಪುಷ್ಪಾ ಅವರನ್ನು ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಶಿಫಾರಸನ್ನು ಸುಪ್ರಿಂಕೋರ್ಟ್ ಕೊಲಿಜಿಯಂ ಹಿಂದಕ್ಕೆ ಪಡೆದಿತ್ತು. ಜ.20 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಅಧಿಕೃತ ಆದೇಶ ಹೊರಟಿದೆ.
12 ವರ್ಷದ ಬಾಲಕಿಯ ಸ್ತನಗಳನ್ನು ಮುಟ್ಟಿದ್ದರಿಂದ ಆರೋಪಿಯೊಬ್ಬನಿಗೆ ಸೆಷನ್ಸ್ ಕೋರ್ಟ್ ಶಿಕ್ಷೆ ನೀಡಿತ್ತು. ಇನ್ನೊಂದು ಪ್ರಕರಣದಲ್ಲಿ ಬಾಲಕಿಯೊಬ್ಬ ಎದುರು ಪ್ಯಾಂಟ್ ಜಿಪ್ ತೆರೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನಿಗೆ ಶಿಕ್ಷೆಯಾಗಿತ್ತು. ಆದರೆ ಈ ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿದ್ದಾಗ, ನ್ಯಾಯಮೂರ್ತಿ ಪುಷ್ಪಾ ಅವರು, ಬಾಲಕಿಯ ಬಟ್ಟೆಯ ಮೇಲಿನಿಂದ ಖಾಸಗಿ ಅಂಗ ಮುಟ್ಟಿದರೆ ಅದು ಪೋಕ್ಸೊ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯ ಆಗುವುದಿಲ್ಲ. ಲೈಂಗಿಕ ದೌರ್ಜನ್ಯ ಆಗಬೇಕಿದ್ದರೆ ಮೈಗೆ ಮೈ (ಸ್ಕಿನ್ ಟು ಸ್ಕಿನ್) ಸೋಕಬೇಕು ಎಂದಿದ್ದರು. ಇನ್ನೊಂದು ಪ್ರಕರಣದಲ್ಲಿ ಪ್ಯಾಂಟ್ ಜಿಪ್ ಬಿಚ್ಚಿದರೆ ಅದು ಲೈಂಗಿಕ ದೌರ್ಜನ್ಯ ಅಲ್ಲ ಎಂದಿದ್ದರು. ಈ ಎರಡೂ ಪ್ರಕರಣಗಳು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ತೀರ್ಪುಗಳನ್ನು ಇದಾಗಲೇ ಸುಪ್ರೀಂಕೋರ್ಟ್ ರದ್ದು ಮಾಡಿದೆ.