

ನವದೆಹಲಿ: ಕರೊನಾದ ಎರಡನೆಯ ಅಲೆ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ನಡುವೆಯೇ ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖರಾದ ಕೆಲವರ ಜೀವ ಕಸಿದಿದೆ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್). ಇದಕ್ಕೆ ವೈದ್ಯಕೀಯ ಹೆಸರು ಮ್ಯುಕೋರ್ಮೈಕೋಸಿಸ್. ಇದಾಗಲೇ ದೆಹಲಿ, ಮಹಾರಾಷ್ಟ್ರಗಳಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಈ ಸೋಂಕಿನಿಂದ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ.
ಈ ಕುರಿತಂತೆ ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್ ಫಂಗಸ್ ಗುರುತಿಸುವುದು ಹೇಗೆ? ಅದಕ್ಕೆ ಚಿಕಿತ್ಸಾ ವಿಧಾನಗಳು ಏನು? ಯಾರನ್ನು ಇದು ಹೆಚ್ಚು ಬಾಧಿಸುತ್ತದೆ? ಇದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಈ ಮಾರ್ಗಸೂಚಿಯಲ್ಲಿ ವಿವರಣೆ ನೀಡಲಾಗಿದೆ.
ಯಾರನ್ನು ಬ್ಲ್ಯಾಕ್ ಫಂಗಸ್ ಹೆಚ್ಚಿಗೆ ಬಾಧಿಸುತ್ತದೆ ಎಂದು ನೋಡೋಣ. ವೈದ್ಯಕೀಯ ವಿಜ್ಞಾನ ಸಂಸ್ಥೆ ಹೇಳಿರುವ ಪ್ರಕಾರ-
* ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು
* ದೀರ್ಘಕಾಲದ ಅನಾರೋಗ್ಯ ಸಮಸ್ಯೆಯುಳ್ಳವರು
* ಅತಿ ಹೆಚ್ಚು ಸ್ಟೀರಾಯ್ಡ್ ಬಳಕೆ ಮಾಡುತ್ತಿರುವವರು, ಅಥವಾ ಆಸ್ಪತ್ರೆಯಲ್ಲಿ ಸ್ಟೀರಾಯ್ಡ್‌ನ ಬಳಕೆಯಾದವರು
* ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಸೇವಿಸುತ್ತಿರುವವರು
* ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು
* ತೀವ್ರ ಸ್ವರೂಪದಲ್ಲಿ ಶೀತ, ಥಂಡಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ಸಮಸ್ಯೆಯಿದ್ದು ಆಕ್ಸಿಜನ್ ಸಹಾಯ ಪಡೆಯುವವರು
ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ ಎಂದು ಹೇಗೆ ಗುರುತಿಸುವುದು?
* ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು
* ಮೂಗಿನಿಂದ ಅಸಹಜ ಎನ್ನಿಸುವಷ್ಟು ಕಪ್ಪು ವಿಸರ್ಜನೆಯಾಗುವುದು, ರಕ್ತ ಸೋರುವುದು
* ಮುಖ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಅನುಭವ
* ಮುಖದಲ್ಲಿ ಊತ, ಕಪ್ಪುಗಟ್ಟುವಿಕೆ, ಗಟ್ಟಿಯಾಗುವಿಕೆ, ನೋವು ಕಾಣಿಸಿಕೊಳ್ಳುವುದು
* ಮೂಗಿನಲ್ಲಿ ಕಿರಿಕಿರಿ, ತಲೆನೋವು
* ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು, ಕಣ್ಣು ಸರಿಯಾಗಿ ಕಾಣದಿರುವುದು, ಅಸ್ಪಷ್ಟತೆ, ಕಣ್ಣು ತೆರೆಯುವುದಕ್ಕೆ ಹಾಗೂ ಮುಚ್ಚುದಕ್ಕೆ ಕಷ್ಟವಾಗುವುದು
* ಹಲ್ಲು ಉದರುವುದು, ಬಾಯಿ ಒಳಗೂ ಕಪ್ಪು ಬಣ್ಣ ಹಾಗೂ ಊತ ಕಾಣಿಸಿಕೊಳ್ಳುವುದು
ಸೋಂಕಿದೆ ಎಂದಾಕ್ಷಣ ಮಾಡಬೇಕಾದುದೇನು?
* ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ಕಣ್ಣಿನ ವೈದ್ಯರು ಅಥವಾ ಸೂಕ್ತ ತಜ್ಞರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
* ರಕ್ತದಲ್ಲಿನ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಅನುಸರಿಸಬೇಕು
* ಯಾವುದೇ ರೀತಿಯ ವಿಪರೀತ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು
* ವೈದ್ಯರನ್ನು ಕೇಳದೆ ಯಾವ ಕಾರಣಕ್ಕೂ ಸ್ಟಿರಾಯ್ಡ್ ಹಾಗೂ ಆ್ಯಂಟಿ ವೈರಲ್ ಡ್ರಗ್ ಉಪಯೋಗಿಸಬಾರದು
* ವೈದ್ಯರ ಸಲಹೆ ಮೇರೆಗೆ ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಿಸಬೇಕು.