

ಬೆಂಗಳೂರು: ಬಿಗ್ಬಾಸ್ ಓಟಿಟಿ ಶುರುವಾಗಿ ಒಂದು ವಾರದಲ್ಲಿಯೇ ಡ್ಯಾನ್ಸರ್ ಕಮ್ ಮಾಡೆಲ್, ಯೋಗಾ ಟೀಚರ್ ಕಿರಣ್ ಯೋಗೇಶ್ವರ್ ಅವರು biggboss ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಡೆಲಿಂಗ್ ಹಾಗೂ ಸಿನಿ ಜಗತ್ತಿನ ಕೆಲವೊಂದು ಕರಾಳ ಮುಖವನ್ನು 'ದಿಗ್ವಿಜಯ ನ್ಯೂಸ್' ಜತೆ ಹಂಚಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕಿರಣ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ನಂತರ ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ತಿಳಿಸಿದ್ದಾರೆ. ಈ ಕ್ಷೇತ್ರಗಳಿಗೆ ಹೊಸದಾಗಿ ಬರುವ ಹುಡುಗಿಯರು ಎಂಥ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬ ಕಹಿ ಸತ್ಯವನ್ನು ಅವರು ಬಹಿರಂಗಗೊಳಿಸಿದ್ದಾರೆ.
ಯಾರದ್ದೇ ಶಿಫಾರಸು ಇಲ್ಲದೇ ಬೇರೆ ರಾಜ್ಯಗಳಿಂದ ಹುಡುಗಿಯರು ಮಾಡೆಲಿಂಗ್ ಕ್ಷೇತ್ರಕ್ಕೆ ಬರುವುದು ತುಂಬಾ ಕಷ್ಟ. ಒಂದು ವೇಳೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕು ಎಂದುಕೊಂಡರೆ ಎಲ್ಲದ್ದಕ್ಕೂ ಸಿದ್ಧವಾಗಿರಲು ಹೋಗಬೇಡಿ, ಏಕೆಂದರೆ ಹೆಣ್ಣುಮಕ್ಕಳಿಗೆ ಮೊದಲಿಗೆ ಕೇಳುವ ವಿಷಯವೇ ಅದು. ನೀವು ಎಲ್ಲದಕ್ಕೂ ಕಾಂಪ್ರಮೈಸ್ ಆಗಲು ರೆಡಿ ಇದ್ದೀರಾ ಎಂದು ಕೇಳುತ್ತಾರೆ. ಒಂದೇ ಸಲಕ್ಕೆ ಖ್ಯಾತ ಮಾಡೆಲ್ ಎನಿಸಿಕೊಳ್ಳಲು ಹೋಗಿ ಎಲ್ಲದಕ್ಕೂ ಎಸ್ ಎಸ್ ಎಂದರೆ ನಿಮ್ಮತನವನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಕಿರಣ್.
ಧೈರ್ಯವಾಗಿರಿ, ಈಗಲ್ಲದಿದ್ದರೆ ಮುಂದೆ ಅವಕಾಶಗಳು ಹುಡುಕಿ ಬರುತ್ತವೆ ಎಂದ ಅವರು, ತಾವು ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದಾಗ ಆದ ಕಹಿ ಅನುಭವವನ್ನು ಹಂಚಿಕೊಂಡರು. ನನಗೆ ಅವಕಾಶ ಕೊಡಲು ಒಬ್ಬರು ರೆಡಿ ಇದ್ದರು. ನಂತರ ಒಂದು ಶಾಟ್ ತೆಗೆದುಕೊಳ್ಳುತ್ತೇನೆ, ಅದರಿಂದ ನೀವು ಪ್ರಸಿದ್ಧರಾಗಬಹುದು, ಓಕೆನಾ ಅಂದರು. ನನಗೆ ತುಂಬಾ ಖುಷಿಯಾಯಿತು. ಓಕೆ ಅಂದೆ. ತಕ್ಷಣ ಮತ್ತೊಂದು ಕರೆ ಬಂತು. ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ನೀವು ಆ ವ್ಯಕ್ತಿಯ ಜತೆ ಒಂದೇ ಒಂದು ದಿನ... ಎಂದು ಹೇಳಿದರು. ನನಗೆ ತುಂಬಾ ಶಾಕ್ ಆಗಿ ಅಲ್ಲಿಗೇ ಮಾಡೆಲಿಂಗ್ ನಿರ್ಧಾರ ಬಿಟ್ಟುಬಿಟ್ಟೆ ಎಂದರು. ನಾನು ಒಪ್ಪದ ಕಾರಣ, ನಿನ್ನ ಮೂಗು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಎನ್ನಲು ಶುರು ಮಾಡಿದರು. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಕ್ರಮೇಣ ಯಾವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಳ್ಳದೇ ಈ ಹಂತಕ್ಕೆ ಬಂದಿದ್ದೇನೆ. ಮಾಡೆಲಿಂಗ್, ಸಿನಿಮಾದಲ್ಲಿ ವಿಪುಲ ಅವಕಾಶ ಸಿಗುತ್ತಿವೆ ಎಂದರು.
ಇದೇ ವೇಳೆ ಬಿಗ್ಬಾಸ್ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಕುರಿತೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಮ್ಮದು ರಾಜಸ್ಥಾನದ ಸಂಪ್ರದಾಯಸ್ಥ ಕುಟುಂಬ. ಏಳನೇ ಕ್ಲಾಸ್ನಲ್ಲಿಯೇ ಮದುವೆ ಮಾಡಲು ನೋಡಿದ್ದರು. ಹಾಗೂ ಹೀಗೂ ಅದರಿಂದ ತಪ್ಪಿಸಿಕೊಂಡೆ. ಕಾಲೇಜಿಗೆ ಹೋಗುತ್ತಿದ್ದ ವೇಳೆ ಮೊಣಕಾಲುದ್ದದ ಒಂದು ಸ್ಕರ್ಟ್ ಹಾಕಿಕೊಂಡಿದ್ದೆ. ನಮ್ಮ ಅಪ್ಪ ಅದನ್ನು ಸುಟ್ಟಿಯೇ ಬಿಟ್ಟರು. ಆದರೆ ನನಗೆ ಸಿಕ್ಕಾಪಟ್ಟೆ ಅಚ್ಚರಿಯಾಗಿದ್ದು ಏನೆಂದರೆ ಇದೇ ಅಪ್ಪ, ಬಿಗ್ಬಾಸ್ನಲ್ಲಿ ನನ್ನ ಬಿಕಿನಿ ಡ್ರೆಸ್ ನೋಡಿ ಏನು ಹೇಳದೇ ಇದ್ದುದು.
ಅಷ್ಟೇ ಅಲ್ಲದೇ, ನೀನು ಇನ್ನುಮುಂದೆ ಇಂಥದ್ದೇ ಸೆಕ್ಸಿ ಡ್ರೆಸ್ ಆಯ್ಕೆ ಮಾಡಿಕೋ ಎಂದರು. ಇವರು ನಿಜವಾಗಿಯೂ ನನ್ನ ಅಪ್ಪ ಹೌದಾ ಎನ್ನುವಷ್ಟರ ಮಟ್ಟಿಗೆ ಸಂದೇಹ ಶುರುವಾಯ್ತು. ನನ್ನ ಸಹೋದರಿನಿಗೂ ಕೇಳಿದೆ, ನಿಜವಾಗಿಯೂ ಅಪ್ಪನೇ ಹೀಗೆ ಹೇಳೋದಾ ಅಂತ. ಈಗ ಅವರಿಗೂ ಮಾಡೆಲಿಂಗ್ ಕ್ಷೇತ್ರದ ಪರಿಚಯವಾಗಿದ್ದು, ಅವರು ಇದನ್ನು ಸಲೀಸಾಗಿ ಸ್ವೀಕರಿಸಿದ್ದಾರೆ ಎಂದು ಕಿರಣ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕಿರಣ್ ಅವರ ಸಂದರ್ಶನ ಇಲ್ಲಿದೆ ಕೇಳಿ