ಅಕ್ಕ-ತಂಗಿ ಸಾಲದು ಅಂತ ಮೂರನೇ ಮದ್ವೆಯಾಗಿ ಹೈಕೋರ್ಟ್‌ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಬೆಂಗಳೂರಿನ ವೃದ್ಧ!

marraige
Published on

ಬೆಂಗಳೂರು: ಅಕ್ಕ-ತಂಗಿಯಂದಿರನ್ನು ಮದುವೆಯಾದದ್ದು ಸಾಲದು ಎಂದು ಇಬ್ಬರೂ ಬದುಕಿರುವಾಗಲೇ ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ವೃದ್ಧನೊಬ್ಬ ಈಗ ಹೈಕೋರ್ಟ್‌ ಆದೇಶದ ಮೇರೆಗೆ ಪೇಚಿಗೆ ಸಿಲುಕಿದ್ದಾರೆ.

ಮೂರು ಮದುವೆಯಾಗಿರುವ 77 ವರ್ಷದ ಸಿ.ಆನಂದ್ ಅಲಿಯಾಸ್ ಅಂಕುಗೌಡ ವಿರುದ್ಧ ಮೊದಲ ಪತ್ನಿ ಅರ್ಜಿ ಸಲ್ಲಿಸಿದ್ದಾರೆ. ದ್ವಿಪತ್ನಿತ್ವದ ಕುರಿತು ಈ ಅರ್ಜಿ ಸಲ್ಲಿಕೆಯಾಗಿದೆ. ಇದನ್ನು ರದ್ದು ಮಾಡುವಂತೆ ಕೋರಿದ್ದ ವೃದ್ಧನ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆಯನ್ನು ಎದುರಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ಏನಿದು ವಿವಾದ?

ಸಿ.ಆನಂದ್ ಅಲಿಯಾಸ್ ಅಂಕುಗೌಡ ಅವರಿಗೆ ಇದಾಗಲೇ 69 ವರ್ಷ ವಯಸ್ಸಿನ ಚಂದ್ರಮ್ಮ ಮತ್ತು ಅವರ ಸಹೋದರಿ ಸಾವಿತ್ರಮ್ಮ ಎನ್ನುವ ಪತ್ನಿಯರು ಇದ್ದರು. ಅಕ್ಕನ ಮನೆಗೆಯಾಗಿ ಮೂರ್ನಾಲ್ಕು ವರ್ಷಗಳ ನಂತರ ತಂಗಿಯನ್ನೂ ಮದುವೆಯಾಗಿದ್ದರು. ಇವರಿಬ್ಬರ ಜತೆ ಸಂಸಾರ ನಡೆಸುತ್ತಿರುವಾಗಲೇ 49 ವರ್ಷದ ಮಹಿಳೆ ಜತೆ ಮದುವೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸೆಷನ್ಸ್‌ ಕೋರ್ಟ್‌ನಲ್ಲಿ ಪತಿಯ ವಿರುದ್ಧ ಚಂದ್ರಮ್ಮ ದೂರು ದಾಖಲು ಮಾಡಿದ್ದಾರೆ. ಇದನ್ನು ರದ್ದು ಮಾಡುವಂತೆ ಆನಂದ್ ಕೋರ್ಟ್‌ ಮೊರೆ ಹೋಗಿದ್ದರು.

ಎರಡನೆಯ ಮದುವೆಯಾಗುವಾಗ ಸುಮ್ಮನಿದ್ದಾಕೆ ಮೂರನೆಯ ಮದುವೆಯಲ್ಲಿ ತಕರಾರು ಎತ್ತಿದ್ದು ಸರಿಯಲ್ಲ. ಅಷ್ಟೇ ಅಲ್ಲದೇ ಮದುವೆಯಾಗಿ ಅನೇಕ ವರ್ಷ ಆದ ಮೇಲೆ ದೂರು ದಾಖಲಿಸಲಾಗಿದೆ. ಇದು ಸರಿಯಲ್ಲ ಎನ್ನುವುದು ಆನಂದ್‌ ವಾದವಾಗಿತ್ತು.

ಆಸ್ತಿ ಪಾಲುದಾರಿಕೆಯಲ್ಲಿ ಉಂಟಾದ ವ್ಯಾಜ್ಯದಿಂದಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ದೂರಿದ್ದರು. ಆನಂದ್‌ ಅವರು ತಮ್ಮ ಮೂರನೇ ಪತ್ನಿಗೆ 2015 ರಲ್ಲಿ ಗಿಫ್ಟ್​ ಡೀಡ್ ಮೂಲಕ ಆಸ್ತಿ ವರ್ಗಾಯಿಸಿದ್ದು, ಇದು ಮೊದಲ ಪತ್ನಿ ಚಂದ್ರಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳ ತಗಾದೆಗೆ ಕಾರಣವಾಗಿದೆ. ತಮ್ಮ ಕಕ್ಷಿದಾರ ಅಂಕುಗೌಡ ಮತ್ತು ಮೂರನೆಯ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಸತ್ಯಾಂಶವನ್ನು ಮುಚ್ಚಿಟ್ಟು ಈ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ ಈ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಅಂಕುಗೌಡ ಪರ ವಕೀಲರು ವಾದ ಮಂಡಿಸಿದರು.

ಆದರೆ ಮೂರು ಮೂರು ಮದುವೆಯಾಗಿರುವುದು ನ್ಯಾಯಮೂರ್ತಿಗಳ ಆಕ್ರೋಶಕ್ಕೆ ಕಾರಣವಾಯಿತು. ಮೊದಲ ಹಾಗೂ ಎರಡನೇ ಹೆಂಡತಿಯ ಸಮ್ಮತಿ ಪಡೆದೇ ಅಂಕುಗೌಡ ಮೂರನೇ ಮದುವೆಯಾಗಿದ್ದಾರೆ ಎಂಬ ವಿಚಾರ ಸದ್ಯ ಗೌಣವೆನಿಸಲಿದೆ. ಹಾಗಾಗಿ ಮೂರನೇ ಮದುವೆಯಾಗಿರುವ ಅರ್ಜಿದಾರರ ವಿರುದ್ಧ ದಾಖಲಾಗಿರುವ ದ್ವಿಪತ್ನಿತ್ವ ದೂರನ್ನು ಈ ಹಂತದಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಆದ್ದರಿಂದ ಆನಂದ್ ಅವರು ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಲಿ ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net