ನೂರಾರು ರೈಲುಗಳನ್ನು ರದ್ದು ಮಾಡಿದ ರಸಗುಲ್ಲಾ! 40 ಗಂಟೆ ಬೃಹತ್‌ ಪ್ರತಿಭಟನೆಗೆ ಕಾರಣವಾಗಿದ್ದು ಈ ತಿನಿಸು

rasagulla
Published on

ಲಖಿಸರಾಯ್ (ಬಿಹಾರ): ಬಿಹಾರ ರಾಜ್ಯ ಲಖಿಸರಾಯ್ ಎಂಬ ಪ್ರದೇಶದ ನೂರಾರು ಜನರು ಕಳೆದ ವಾರದಂದು ಸತತ 40 ಗಂಟೆಗಳ ಕಾಲ ಬೃಹತ್ ಪ್ರತಿಭಟನೆಯೊಂದನ್ನು ಮಾಡಿದ್ದರು. ಇದಕ್ಕೆ ಕಾರಣವಾಗಿದ್ದ ರಸಗುಲ್ಲಾ ಎಂದರೆ ನಂಬುವಿರಾ?

ನಂಬಲೇಬೇಕು. ರಸಗುಲ್ಲಕ್ಕಾಗಿಯೇ ಈ ಪ್ರತಿಭಟನೆ ನಡೆದಿತ್ತು. ಸುಮಾರು 40 ಗಂಟೆಗಳ ಕಾಲ ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ಲಖಿಸರಾಯ್ ಪ್ರದೇಶದಲ್ಲಿ ಬರುವ ಬಾರಾಹಿಯಾ ಎಂಬ ರೈಲು ನಿಲ್ದಾಣದಲ್ಲಿ ಕನಿಷ್ಠ ಹತ್ತು ರೈಲುಗಳಾದರೂ ನಿಲ್ಲಬೇಕು ಎನ್ನುವುದು ಈ ಪ್ರತಿಭಟನೆಗೆ ಮೂಲ ಕಾರಣವಾಗಿತ್ತು.

ಬಾರಾಹಿಯಾಕ್ಕೂ, ರಸಗುಲ್ಲಾಕ್ಕೂ ಪ್ರತಿಭಟನೆಗೂ ಏನು ಸಂಬಂಧ ಎನ್ನುತ್ತೀರಾ?

ಬಾರಾಹಿಯಾ ಪಟ್ಟಣ ರಸಗುಲ್ಲಾಕ್ಕೆ ಸಕತ್‌ ಪ್ರಸಿದ್ಧಿ ಹೊಂದಿದೆ. ಕೋವಿಡ್‌ಗೂ ಮೊದಲು ಇಲ್ಲಿ ಬಹುತೇಕ ರೈಲುಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ರಸಗುಲ್ಲಾ ಖರೀದಿಗಾಗಿಯೂ ರೈಲು ಪ್ರಯಾಣಿಕರು ಮುಗಿಬಿದ್ದು ಇಲ್ಲಿ ರಸಗುಲ್ಲಾ ಖರೀದಿಸಿ ಸವಿ ಮೆಲ್ಲುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಇಲ್ಲಿ ರೈಲಿನ ನಿಲುಗಡೆಯನ್ನು ರದ್ದುಗೊಳಿಸಲಾಗಿತ್ತು. ಅದರಿಂದಾಗಿ ರಸಗುಲ್ಲಾ ಮಾರಾಟಗಾರರ ಹಾಗೂ ಅವರ ವ್ಯಾಪಾರದ ಮೇಲೆ ವಿಪರೀತ ಪರಿಣಾಮ ಉಂಟಾಗಿದೆ. ಈಗಲೂ ಅಲ್ಲಿ ರೈಲು ನಿಲ್ಲಿಸುತ್ತಿಲ್ಲ.

ಇದರಿಂದಾಗಿ ವ್ಯಾಪಾರಿಗಳು ಈ ಭಾರಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯ ರೂಪವಾಗಿ ಹಳಿಗಳ ಮೇಲೆ ಟೆಂಟುಗಳನ್ನು ನಿರ್ಮಿಸಿದ್ದರು, ಪರಿಣಾಮ ಹಲವಾರು ರೈಲುಗಳು ಮುಂದೆ ಚಲಿಸಲಾಗದೆ ಅಲ್ಲೆ ನಿಲ್ಲುವಂತಾಗಿತ್ತು. ಹೌರಾ-ದೆಹಲಿ ಮಾರ್ಗದಲ್ಲಿ ಬರುವ ಈ ಮಾರ್ಗದಲ್ಲಿ ಮುಂಚೆಯೇ ನಿಗದಿಯಾಗಿದ್ದ ಹಲವಾರು ರೈಲುಗಳನ್ನು ಪ್ರತಿಭಟನೆಯ ಕಾರಣ 24 ಗಂಟೆಗಳ ಕಾಲ ರದ್ದುಗೊಳಿಸಬೇಕಾಯಿತು ಹಾಗೂ ಕನಿಷ್ಠ ನೂರು ರೈಲುಗಳಿಗೆ ಮಾರ್ಗಗಳನ್ನು ಬದಲಾಯಿಸ ಬೇಕಾಯಿತು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net