

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸಿತ್ತು. ಆದರೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಲಿಲ್ಲ.
ಇದಕ್ಕೆ ಕಾರಣ, ಸುಪ್ರೀಂಕೋರ್ಟ್ನ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿರುವುದು. ಓರ್ವ ನ್ಯಾಯಮೂರ್ತಿ ಹೈಕೋರ್ಟ್ ತೀರ್ಪಿನ ಪರವಾಗಿ ಇದ್ದರೆ ಇನ್ನೋರ್ವ ನ್ಯಾಯಮೂರ್ತಿ ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ತೀರ್ಪು ನೀಡಿದರು.
ಈ ಹಿನ್ನೆಲೆಯಲ್ಲಿ, ವಿವಾದದ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳು ಇರುವ ತ್ರಿಸದಸ್ಯಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಪೀಠ ರಚನೆಯಾದ ನಂತರ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಮೂವರು ನ್ಯಾಯಮೂರ್ತಿಗಳಲ್ಲಿ ಮೂವರು ಅಥವಾ ಇಬ್ಬರು ಯಾವ ನಿಲುವು ತಾಳುತ್ತಾರೆಯೋ ಅದೇ ಅಂತಿಮವಾಗಲಿದೆ.
ಈ ಪ್ರಕರಣದ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಕರ್ನಾಟಕ ವಕ್ಫ್ ಬೋರ್ಡ್ ಪರ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಕೋರ್ಟ್ಗೆ ಇದೇ ವೇಳೆ ಕೋರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಗಣೇಶೋತ್ಸವ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಕುತೂಹಲ ಮನೆಮಾಡಿದೆ.
ಕರ್ನಾಟಕ ಹೈಕೋರ್ಟ್ನ ಏಕ ಸದಸ್ಯ ಪೀಠವು ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿರಲಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಆದರೆ, ಮರುದಿನವೇ ಹೈಕೋರ್ಟ್ ವಿಭಾಗೀಯ ಪೀಠವು ಯಾರು ಯಾವ ಆಚರಣೆಯನ್ನಾದರೂ ಮಾಡಬಹುದು ಎಂದಿದೆ. ಇದು ಅನಗತ್ಯ ವಿವಾದ, ಗೊಂದಲ ಹಾಗೂ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಅವರು ವಾದಿಸಿದರು. ಬೆಂಗಳೂರು ಮಹಾನಗರ ಪಾಲಿಕೆಯು ಈದ್ಗಾ ಮೈದಾನದ ಮೇಲೆ ಯಾವುದೇ ಹಕ್ಕು ಹೊಂದಿಲ್ಲ ಎಂದು ವಿವರಿಸಿದರು.
ಈ ನಡುವೆ, ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 3 ಡಿಸಿಪಿ, 21 ಎಸಿಪಿ, 47 ಇನ್ಸ್ಪೆಕ್ಟರ್ಗಳು, 130 ಪಿಎಸ್ಐ, 126 ASI, 900 ಕಾನ್ಸ್ಟೇಬಲ್ಗಳು, 120 RAF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್)