ಬಾಬ್ರಿ ಕಟ್ಟಡ ಧ್ವಂಸ ತೀರ್ಪು ಸೆ.30ಕ್ಕೆ: ಆಡ್ವಾಣಿ ಸೇರಿ ಎಲ್ಲ ಆರೋಪಿಗಳು ಕೋರ್ಟ್‌ನಲ್ಲಿರಲು ಆದೇಶ

babri
Published on

ಲಖನೌ: ಇದೇ 30ರಂದು ಇಡೀ ದೇಶದ ಕಣ್ಣು ಲಖನೌನ ವಿಶೇಷ ಸಿಬಿಐ ಕೋರ್ಟ್​ ಮೇಲೆ ಇರಲಿದೆ. ಏಕೆಂದರೆ, 28 ವರ್ಷಗಳ ಹಳೆಯದಾಗಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಅಂದು ಹೊರಬೀಳಲಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌.ಕೆ.ಯಾದವ್‌, ಅಂದು ತೀರ್ಪು ನೀಡಲಿದ್ದು, ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಮುರಳಿ ಮನೋಹರ್‌ ಜೋಷಿ, ಉಮಾ ಭಾರತಿ ಸೇರಿದಂತೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳು ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ. ಸೆ.1ರಂದು ಘಟನೆಗೆ ಸಂಬಂಧಿಸಿದಂತೆ ವಾದ, ಪ್ರತಿವಾದಗಳು ಮುಗಿದಿವೆ.

ಏನಿದು ಪ್ರಕರಣ? 1992ರ ಡಿಸೆಂಬರ್‌ 6. ಅಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕಾರಸೇವಕರು ಧ್ವಂಸಗೊಳಿಸಿದ್ದರು. ದೇಶಾದ್ಯಂತ ಕೋಮು ಸಂಘರ್ಷ ಭುಗಿಲೆದ್ದಿತ್ತು. ಮುಂಬಯಿ ಬಾಂಬ್‌ ಸ್ಫೋಟ, ಗೋಧ್ರಾ ದಹನ, ಗುಜರಾತ್‌ ಗಲಭೆಗಳು ಕೂಡ ನಡೆದದ್ದು ಇದೇ ಸಂದರ್ಭದಲ್ಲಿ.

ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಅಂದರೆ 1990ರಲ್ಲಿ ಗೋಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್​ಶೀಟ್​ನಲ್ಲಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ 92 ವರ್ಷದ ಎಲ್‌.ಕೆ.ಅಡ್ವಾಣಿಯವರು ಜುಲೈ 24ರಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದರು. ಇನ್ನು, ಮುರುಳಿ ಮನೋಹರ್‌ ಜೋಷಿ ಜುಲೈ 23ರಂದು ತಮ್ಮ ಹೇಳಿಕೆ ದಾಖಲಿಸಿದ್ದು, ಇಬ್ಬರೂ ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪಗಳನ್ನು ನಿರಾಕರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  351 ಸಾಕ್ಷಿದಾರರು ಹಾಗೂ 600 ಸಾಕ್ಷ್ಯಗಳನ್ನು ಸಿಬಿಐ ಇದಾಗಲೇ ಕೋರ್ಟ್​ ಮುಂದೆ ಹಾಜರುಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net